ಸಿಕ್ಕಿಂ : ಉತ್ತರ ಸಿಕ್ಕಿಂನಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಂದುರೆದಿವೆ. ಎಂಟು ದಿನಗಳ ಹಿಂದೆ ಭೂಕುಸಿತದಿಂದ ಕಾಣೆಯಾಗಿದ್ದ ಸೈನಿಕನ ಮೃತದೇಹವನ್ನು ಎನ್‌ಡಿಆರ್‌ಎಫ್ ಮತ್ತು ಭಾರತೀಯ ಸೇನೆ ವಶಪಡಿಸಿಕೊಂಡಿವೆ. ಇನ್ನೂ ಐದು ಜನರು ಕಾಣೆಯಾಗಿದ್ದಾರೆ. ಜೂನ್ 1 ರಂದು ಭಾರಿ ಮಳೆಯಿಂದಾಗಿ ಉತ್ತರ ಸಿಕ್ಕಿಂನಲ್ಲಿ ಭಾರಿ ಭೂಕುಸಿತ ಸಂಭವಿಸಿತ್ತು. ಉತ್ತರ ಸಿಕ್ಕಿಂನ ಲಾಚೆನ್, ಲಾಚುಂಗ್, ಚುಂಗ್‌ಥಾಂಗ್, ಚಾಟೆನ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಭೂಕುಸಿತ ಉಂಟಾಗಿತ್ತು. ಭೂ ಕುಸಿತದಿಂದಾಗಿ ಚಾಟೆನ್‌ನಲ್ಲಿರುವ ಭಾರತೀಯ ಸೇನಾ ಶಿಬಿರವು ತೀವ್ರ ಹಾನಿಗೊಳಗಾಗಿದೆ. ಅಂದಿನಿಂದ ಭಾರತೀಯ ವಾಯುಪಡೆ ಮತ್ತು ಎನ್‌ಡಿಆರ್‌ಎಫ್ ಏರ್‌ಲಿಫ್ಟ್‌ಗಳ ಮೂಲಕ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.
ಕಾರ್ಯಾಚರಣೆಯಲ್ಲಿ ಸುಮಾರು 2000 ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಗಳನ್ನು ರಕ್ಷಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಚಾಲಕರನ್ನು ಏರ್‌ಲಿಫ್ಟ್‌ಗಳ ಮೂಲಕ ರಕ್ಷಿಸುವಂತೆ ಭಾರತೀಯ ವಾಯುಪಡೆಯನ್ನು ವಿನಂತಿಸಿತ್ತು. ಅದರಂತೆ ಭಾನುವಾರ ಮತ್ತು ಸೋಮವಾರ ಭಾರತೀಯ ವಾಯುಪಡೆ ಏರ್‌ಲಿಫ್ಟ್ ಮೂಲಕ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಏರ್‌ಲಿಫ್ಟ್ ಮೂಲಕ ಇದುವರೆಗೂ 48 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. 48 ಜನರಲ್ಲಿ 20 ಸೇನಾ ಸಿಬ್ಬಂದಿ. ಮೂವರು ಮಕ್ಕಳು ಸೇರಿದಂತೆ ಒಟ್ಟು 28 ಸ್ಥಳೀಯ ನಿವಾಸಿಗಳು ಮತ್ತು ಚಾಲಕರನ್ನು ಸಹ ರಕ್ಷಿಸಲಾಗಿದೆ. ರಕ್ಷಣಾ ಕಾರ್ಯದ ನಂತರ ವಾಹನಗಳ ಚಾಲಕರು ಸಿಕ್ಕಿಂ ಆಡಳಿತ ಮತ್ತು ಭಾರತೀಯ ವಾಯುಪಡೆಗೆ ಧನ್ಯವಾದ ಅರ್ಪಿಸಿದ್ದಾರೆ.
ಸೇನೆ ಮತ್ತು ಎನ್‌ಡಿಆರ್‌ಎಫ್ ಚಾಟೆನ್ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ. ಚಾಟೆನ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದ ಸೈನುದಿನ್ ಪಿಕೆ ಎಂಬ ಜವಾನ ನಾಪತ್ತೆಯಾಗಿದ್ದರು. ಅವರ ಮೃತದೇಹ ಇದೀಗ ಪತ್ತೆಯಾಗಿದೆ. ಜೂನ್ 1 ರಿಂದ ಅವರು ಕಾಣೆಯಾಗಿದ್ದರು. ಘಟನೆಯಲ್ಲಿ ಇನ್ನೂ ಐದು ಜನರು ಕಾಣೆಯಾಗಿದ್ದಾರೆ. ಸಿಕ್ಕಿಂ ಆಡಳಿತವು ಲಾಚೆನ್, ಲಾಚುಂಗ್ ಮತ್ತು ಚಾಟೆನ್ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ. ಉತ್ತರ ಸಿಕ್ಕಿಂನ ಎಲ್ಲಾ ರಸ್ತೆಗಳು ಇನ್ನೂ ಸಾಮಾನ್ಯ ಸ್ಥಿತಿಗೆ ಬಂದಿಲ್ಲ. ಅವುಗಳನ್ನು ಸಹಜ ಸ್ಥಿತಿಗೆ ತರಲು ಅಲ್ಲಿನ ಆಡಳಿತ ನಿರಂತರ ಕೆಲಸ ಮಾಡುತ್ತಿದೆ.