ಛತ್ತೀಸ್ಗಢ್ : ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಸೋಮವಾರ ನೆಲದೊಳಗೆ ಅಡಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ವಸ್ತು (IED) ಸ್ಫೋಟಿಸಿ ಹಿರಿಯ ಪೊಲೀಸ್ ಅಧಿಕಾರಿಯನ್ನು ಕೊಂದಿದ್ದಾರೆ.
ಕೊಂಟಾ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ (ASP) ಆಕಾಶ್ ರಾವ್ ಗಿರೆಪುಂಜೆ ನೆಲಬಾಂಬ್ ಸ್ಫೋಟದಲ್ಲಿ ಹುತಾತ್ಮರಾಗಿದ್ದಾರೆ. 2013ನೇ ಬ್ಯಾಚ್ನ ರಾಜ್ಯ ಪೊಲೀಸ್ ಇಲಾಖೆ ಅಧಿಕಾರಿಯಾಗಿದ್ದ ಅವರು ನಕ್ಸಲ್ ಬಾಂಬ್ ದಾಳಿಗೆ ಬಲಿಯಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ವಿಜಯ್ ಶರ್ಮಾ ತಿಳಿಸಿದ್ದಾರೆ. ಚತ್ತೀಸ್ಗಢ್ ನಕ್ಸಲ್ ಮುಕ್ತವಾಗುತ್ತಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಳುತ್ತಿರುವಾಗಲೇ ಇಂದು ಹಿರಿಯ ಅಧಿಕಾರಿ ಬಾಂಬ್ ಸ್ಫೋಟದಿಂದ ಹುತಾತ್ಮರಾಗಿರುವುದು ಅಲ್ಲಿನ ಪೊಲೀಸರು ಮತ್ತು ಭದ್ರತಾ ಪಡೆಗಳ ನಿದ್ದೆಗೆಡಿಸಿದೆ. ಕೊಂಟಾ-ಎರ್ರಾಬೋರ್ ರಸ್ತೆಯ ದೋಂಡ್ರಾ ಗ್ರಾಮದ ಬಳಿ ಘಟನೆ ನಡೆದಾಗ ಎಎಸ್ಪಿ ಮತ್ತು ಇತರ ಸಿಬ್ಬಂದಿ ಕಾಲ್ನಡಿಗೆಯಲ್ಲಿ ಗಸ್ತು ತಿರುಗುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಸುಕ್ಮಾದ ಎಎಸ್ಪಿ ಆಕಾಶ್ ರಾವ್ ಗಿರೆಪುಂಜೆ ಕೊಂಟಾ ಎರ್ರಾಬೋರ್ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಅವರು ದೋಂಡ್ರಾ ಬಳಿ ನೆಲದಡಿ ಇಟ್ಟಿದ್ದ ಐಇಡಿ ಬಾಂಬ್ ಅನ್ನು ತುಳಿದಿದ್ದರಿಂದ ಬಾಂಬ್ ಸ್ಫೋಟಗೊಂಡಿತು. ಐಇಡಿ ಸ್ಫೋಟದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಜವಾನರು ಕೂಡ ಗಾಯಗೊಂಡರು ಮತ್ತು ಅವರನ್ನು ತಕ್ಷಣ ಚಿಕಿತ್ಸೆಗಾಗಿ ಕೊಂಟಾ ಸಮುದಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎಎಸ್ಪಿ ಆಕಾಶ್ ರಾವ್ ಚಿಕಿತ್ಸೆಯ ಸಮಯದಲ್ಲಿ ಉಸಿರು ಚೆಲ್ಲಿದರು. ಇತರ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ" ಎಂದು ಬಸ್ತಾರ್ ಐಜಿ ಸುಂದರರಾಜ್ ಪಿ ಮಾಹಿತಿ ನೀಡಿದರು.
ಈ ಘಟನೆ ಇಂದು ಬೆಳಗ್ಗೆ 9 ರಿಂದ 10 ಗಂಟೆಯ ನಡುವೆ ನಡೆದಿದೆ ಎಂದು ಅವರು ಹೇಳಿದರು. ಮಂಗಳವಾರ ನಕ್ಸಲರು ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಗಸ್ತು ತಿರುಗುವಿಕೆಯನ್ನು ಪ್ರಾರಂಭಿಸಲಾಯಿತು ಎಂದು ಅಧಿಕಾರಿ ಹೇಳಿದರು. "ಎಎಸ್ಪಿ ಗಿರೆಪುಂಜೆ ಸ್ಫೋಟದಲ್ಲಿ ಹುತಾತ್ಮರಾದರು. ಅವರು ಧೈರ್ಯಶಾಲಿ ಅಧಿಕಾರಿ ಮತ್ತು ಶೌರ್ಯ ಪ್ರಶಸ್ತಿ ಪುರಸ್ಕೃತರು" ಎಂದು ಉಪ ಮುಖ್ಯಮಂತ್ರಿ ಶರ್ಮಾ ನಾಗ್ಪುರದಲ್ಲಿ ಹೇಳಿದರು. "(ನಕ್ಸಲರು ಮತ್ತು ಸರ್ಕಾರದ ನಡುವೆ) ಮಾತುಕತೆಗೆ ಒಂದು ಸನ್ನಿವೇಶ ನಿರ್ಮಾಣವಾದರೆ, ಅದು ಅಂತಹ ಘಟನೆಗಳೊಂದಿಗೆ (ಸ್ಫೋಟವನ್ನು ಉಲ್ಲೇಖಿಸಿ) ಕೊನೆಗೊಳ್ಳುತ್ತದೆ" ಎಂದು ಅವರು ಹೇಳಿದರು.
"ಒಂದೇ ಒಂದು ಗುಂಡನ್ನು ಹಾರಿಸಲು ಬಯಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ, ಆದರೆ ಅವರು (ನಕ್ಸಲರು) ಮುಖ್ಯವಾಹಿನಿಗೆ ಸೇರಬೇಕು, ಪುನರ್ವಸತಿ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಮತ್ತು ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಶರ್ಮಾ ಹೇಳಿದರು.