ತಮಿಳುನಾಡು : ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ತಮಿಳುನಾಡಿನ ಮಧುರೈನಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಧುರೈ ಅನ್ನು ಪರಿವರ್ತನೆಯ ನಗರ ಎಂದು ಬಣ್ಣಿಸಿರುವ ಅಮಿತ್ ಶಾ, ನಮ್ಮ ಪಕ್ಷದ ಕಾರ್ಯಕರ್ತರ ಸಭೆ ಡಿಎಂಕೆ ಸರ್ಕಾರವನ್ನು ಕೆಳಗಿಳಿಸಿ ಹೊಸ ಬದಲಾವಣೆಗೆ ನಾಂದಿ ಹಾಡಲಿದೆ ಎಂದರು.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಎಐಎಡಿಂಕೆ ನೇತೃತ್ವದಲ್ಲಿ ಎನ್ ಡಿಎ ಸರ್ಕಾರ ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಜನರು ಡಿಎಂಕೆಯನ್ನು ಸೋಲಿಸಲಿದ್ದಾರೆ. ಡಿಎಂಕೆ ಸರ್ಕಾರ ಶೇ 100ರಷ್ಟು ವಿಫಲ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ರಾಜ್ಯ, ಜಿಲ್ಲಾ ಮತ್ತು ಮಂಡಲ ಮಟ್ಟದ ಪಕ್ಷದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುವ ಮೊದಲು, ಅಮಿತ್ ಶಾ ರಾಜ್ಯ ಕೋರ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಸಿದ್ಧ ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಮಾತನಾಡಿ, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಕುರಿತಾಗಿ ಡಿಎಂಕೆ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಪಶ್ಚಿಮ ಕೊಂಗು ಪ್ರದೇಶದ ಹಳ್ಳಿಗಳಲ್ಲಿ ವೃದ್ಧರನ್ನು ಗುರಿಯಾಗಿಟ್ಟುಕೊಂಡು ನಡೆದ ಹತ್ಯೆಗಳ ಬಗ್ಗೆ ಪೊಲೀಸರ ಕಾರ್ಯವೈಖರಿಯನ್ನು ಅವರು ಪ್ರಶ್ನಿಸಿದರು. ಇದೇ ವೇಳೆ, ರಾಜ್ಯದಲ್ಲಿ ಎನ್ ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರಲು ಪಕ್ಷದ ಕಾರ್ಯಕರ್ತರು ದೃಢ ನಿಶ್ಚಯದಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಎಐಎಡಿಎಂಕೆ ಜೊತೆಗಿನ ಮೈತ್ರಿಯನ್ನು "ಸೂಕ್ತ ಮೈತ್ರಿ" ಎಂದ ನಾಗೇಂದ್ರನ್, "ಯಾತ್ರೆ"ಯ ರೀತಿ ಗರಿಷ್ಠ ಸಂಖ್ಯೆಯ ಶಾಸಕರನ್ನು ವಿಧಾನಸಭೆಗೆ ಕರೆದೊಯ್ಯುವುದು ತಮ್ಮ ಸಂಕಲ್ಪ ಎಂದು ಹೇಳಿದರು. ಇದೇ ಸಂದರ್ಭದಲ್ಲಿ, ಅಮಿತ್ ಶಾರನ್ನು "ಭಾರತದ ಉಕ್ಕಿನ ಮನುಷ್ಯ. ಮತ್ತೊಬ್ಬ ಸರ್ದಾರ್ ವಲ್ಲಭಭಾಯಿ ಪಟೇಲ್" ಎಂದು ಗುಣಗಾನ ಮಾಡಿದರು.