ಇಸ್ರೇಲ್ : ಗಾಜಾ ಮೇಲೆ ಇಸ್ರೇಲ್ ದಾಳಿ ತೀವ್ರಗೊಳಿಸಿದೆ. ಈ ಮಧ್ಯೆ ಇತ್ತೀಚೆಗೆ, ಗಾಜಾದ ಖಾನ್ ಯೂನಿಸ್ ಎಂಬಲ್ಲಿರುವ ಪ್ರಮುಖ ಆಸ್ಪತ್ರೆಯ ಕೆಳಗಡೆ ಗಾಜಾ ಉಗ್ರರು ಸುರಂಗ ನಿರ್ಮಿಸಿರುವುದನ್ನು ಪತ್ತೆ ಹಚ್ಚಿದ್ದೇವೆ ಎಂದು ಇಸ್ರೇಲ್ ಸೇನಾಪಡೆ (IDF) ತಿಳಿಸಿದೆ. ಅಲ್ಲಿನ ಯೂರೋಪಿಯನ್ ಆಸ್ಪತ್ರೆಯ ಆವರಣದಲ್ಲಿ ಈ ಸುರಂಗವನ್ನು ಕಂಡುಹಿಡಿದಿರುವುದಾಗಿ ಸೇನೆ ಹೇಳಿದೆ.
ಹಮಾಸ್ ನ ಹಿರಿಯ ನಾಯಕರು ಇದನ್ನು ತಮ್ಮ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಹಾಗು ಇಸ್ರೇಲ್ ಮೇಲೆ ದಾಳಿ ನಡೆಸಲು ಬೇಸ್ ಆಗಿ ಬಳಸುತ್ತಿದ್ದರು ಎಂದು ಸೇನೆ ತಿಳಿಸಿದೆ. ಸುರಂಗದ ವೀಡಿಯೋವನ್ನು ಐಡಿಎಫ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿರುವ ನಿಯಂತ್ರಣ ಕೇಂದ್ರಗಳು, ಕಣ್ಗಾವಲು ಉಪಕರಣಗಳು ಹಾಗು ಮತ್ತಿತರೆ ಸಲಕರಣೆಗಳನ್ನು ಕೂಡಿಟ್ಟಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು.
ಇಸ್ರೇಲ್ ಗುಪ್ತಚರ ನಿರ್ದೇಶನಾಲಯದ ಮಾರ್ಗದರ್ಶನದಲ್ಲಿ ಗೋಲನ್ ಬ್ರಿಗೇಡ್, ಯಹಲೋಮ್ ಘಟಕ ಮತ್ತು ವಿಶೇಷ ಪಡೆಗಳು ಈಚೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಈ ವೀಡಿಯೊವನ್ನು ತೆಗೆಯಲಾಯಿತು ಎಂದು ಐಡಿಎಫ್ ಹೇಳಿದೆ. ಹಮಾಸ್ ಉಗ್ರರು ಗಾಜಾದಲ್ಲಿರುವ ಆಸ್ಪತ್ರೆಗಳನ್ನು ತನ್ನ ಸ್ವಂತ ಉದ್ದೇಶಗಳನ್ನು ಈಡೇರಿಸಲು ನೆಲೆಗಳನ್ನಾಗಿ ಬಳಸುತ್ತಿದ್ದಾರೆ. ಈ ಮೂಲಕ ನಾಗರಿಕರ ಜೀವಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ಅದು ಆರೋಪಿಸಿದೆ.
2023ರಲ್ಲಿ ಗಾಜಾದಲ್ಲಿರುವ ಅತಿದೊಡ್ಡ ಆಸ್ಪತ್ರೆ ಅಲ್ ಶಿಫಾದ ಅಡಿಯಲ್ಲಿ ಸುರಂಗ ಕಂಡುಹಿಡಿದಿರುವುದಾಗಿ ಐಡಿಎಫ್ ಹೇಳಿತ್ತು. ಅವುಗಳನ್ನು ನಾಶಮಾಡಲು ದಾಳಿ ಮಾಡಿದಾಗ ಅನೇಕ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಯಿತು ಎಂದು ತಿಳಿಸಿತ್ತು. ಆದರೆ, ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ಮತ್ತು ಅಲ್ಲಿನ ವೈದ್ಯಕೀಯ ಸಿಬ್ಬಂದಿ ಇಸ್ರೇಲ್ ಹೇಳುತ್ತಿರುವುದೆಲ್ಲವೂ ಸುಳ್ಳು ಎನ್ನುತ್ತಿದೆ.
2023ರ ಅಕ್ಟೋಬರ್ ನಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅಂದಾಜು 53,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಸ್ಥಳೀಯ ಆಡಳಿತ ಹೇಳುತ್ತಿದೆ. ಕಳೆದ 24 ಗಂಟೆಗಳಲ್ಲೇ 60 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.