image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೊಲಂಬಿಯಾದ ಅಧ್ಯಕ್ಷೀಯ ಚುನಾವಣೆ ಸಂಭಾವ್ಯ ಅಭ್ಯರ್ಥಿ ಸೆನೆಟರ್ ಮೇಲೆ ಗುಂಡಿನ ದಾಳಿ

ಕೊಲಂಬಿಯಾದ ಅಧ್ಯಕ್ಷೀಯ ಚುನಾವಣೆ ಸಂಭಾವ್ಯ ಅಭ್ಯರ್ಥಿ ಸೆನೆಟರ್ ಮೇಲೆ ಗುಂಡಿನ ದಾಳಿ

ಬೊಗೋಟಾ: ಕೊಲಂಬಿಯಾದ ಅಧ್ಯಕ್ಷೀಯ ಚುನಾವಣಾ ರ‍್ಯಾಲಿ ವೇಳೆ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಸೆನೆಟರ್ ಮಿಗುಯೆಲ್ ಉರಿಬೆ ಟರ್ಬೆ ಅವರ ಮೇಲಿನ ಗುಂಡಿನ ದಾಳಿ ನಡೆದಿದೆ. ಪರಿಣಾಮ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಸೆಂಟರ್ ಪಕ್ಷದ ಸೆನೆಟರ್ ಮಿಗುಯೆಲ್ ಉರಿಬೆ ಟರ್ಬೆ ಅವರು ಸಂಭಾವ್ಯ ಅಭ್ಯರ್ಥಿಯಾಗಿದ್ದು, ರ‍್ಯಾಲಿಯಲ್ಲಿ ಭಾಷಣ ಮಾಡುವ ವೇಳೆ ಗುಂಡಿನ ದಾಳಿಯಾಗಿದೆ. ಈ ದಾಳಿ ಖಂಡನೀಯ ಎಂದು ಡೆಮಾಕ್ರಟಿಕ್ ಸೆಂಟರ್ ಪಕ್ಷ ಆಕ್ರೋಶ ಹೊರಹಾಕಿದೆ.

ಫಾಂಟಿಬಾನ್ ಬಳಿಯ ಉದ್ಯಾನವನದಲ್ಲಿ ಶಸ್ತ್ರಸಜ್ಜಿತ ದಾಳಿಕೋರರು ಹಿಂದಿನಿಂದ ಸೆನೆಟರ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಮಾಜಿ ಅಧ್ಯಕ್ಷ ಅಲ್ವಾರೊ ಉರಿಬೆ ಸ್ಥಾಪಿಸಿದ ಬಲಪಂಥೀಯ ಪಕ್ಷ ಹೇಳಿದೆ. ಉರಿಬೆ ಟರ್ಬೆ ಅವರು ರಕ್ತದ ಮಡುವಿನಲ್ಲಿರುವುದು ಮತ್ತು ತಲೆಗೆ ಗಾಯವಾಗಿರುವ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈವರೆಗೆ ಸೆನೆಟರ್ ಅವರ ಆರೋಗ್ಯ ಸ್ಥಿತಿ ಕುರಿತು ಯಾವುದೇ ಖಚಿತ ಬುಲೆಟಿನ್ ಬಿಡುಗಡೆಯಾಗಿಲ್ಲ.

ಗುಂಡಿನ ದಾಳಿ ನಡೆಸಿದ ಶಂಕಿತನನ್ನು ಸೆರೆಹಿಡಿಯಲಾಗಿದೆ ಎಂದು ಬೊಗೋಟಾ ಮೇಯರ್ ಕಾರ್ಲೋಸ್ ಗ್ಯಾಲನ್ ಸಾಮಾಜಿಕ ವೇದಿಕೆ ಎಕ್ಸ್​​ನಲ್ಲಿ ತಿಳಿಸಿದ್ದಾರೆ. ಆದರೆ ಫೆಡರಲ್ ಸರ್ಕಾರವು ದಾಳಿಕೋರನನ್ನು ಹಿಡಿದು ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದೆ. "ಬದುಕನ್ನು ಗೌರವಿಸಿ" ಎಂದು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ತಮ್ಮ X ಖಾತೆಯಲ್ಲಿ ಪೋಸ್ಟ್ ಮಾಡಿ ಸಂದೇಶದಲ್ಲಿ ತಿಳಿಸಿದ್ದಾರೆ. ಈ ಪೋಸ್ಟ್ ಮಾಡಿದ ಸ್ವಲ್ಪ ಸಮಯದ ನಂತರ, ಪೆಟ್ರೋ ಅವರು "ದಾಳಿಯ ಗಂಭೀರತೆಯಿಂದಾಗಿ" ಫ್ರಾನ್ಸ್‌ಗೆ ಯೋಜಿಸಿದ್ದ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ಅಧ್ಯಕ್ಷೀಯ ಹೇಳಿಕೆ ಬಿಡುಗಡೆಯಾಗಿದೆ.

ದಾಳಿಯ ಸಮಯದಲ್ಲಿ ಉರಿಬೆ ಟರ್ಬೆ ಅವರೊಂದಿಗೆ ಕೌನ್ಸಿಲ್‌ಮನ್ ಆಂಡ್ರೆಸ್ ಬ್ಯಾರಿಯೊಸ್ ಮತ್ತು ಇತರ 20 ಜನರು ಇದ್ದರು ಎಂದು ಕೊಲಂಬಿಯಾದ ಪೊಲೀಸ್ ಮುಖ್ಯಸ್ಥ ಜನರಲ್ ಕಾರ್ಲೋಸ್ ಟ್ರಿಯಾನಾ ಹೇಳಿದರು. ದಾಳಿಯಲ್ಲಿ ಭಾಗವಹಿಸಿದ್ದ ಎನ್ನಲಾದ ಅಪ್ರಾಪ್ತನನ್ನು ಘಟನಾ ಸ್ಥಳದಲ್ಲಿ ಬಂಧಿಸಲಾಯಿತು ಮತ್ತು ಕಾಲಿನ ಗಾಯಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ದಾಳಿ ಮಾಡಿದ ಬಂದೂಕನ್ನು ಸಹ ವಶಪಡಿಸಿಕೊಳ್ಳಲಾಗಿದೆ.

Category
ಕರಾವಳಿ ತರಂಗಿಣಿ