ಮಣಿಪುರ : ಮೈತೆಯಿ ಸಂಘಟನೆಯ ನಾಯಕ ಅರಾಂಬೈ ಟೆಂಗೋಲ್ ಅವರನ್ನು ಬಂಧಿಸಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿ ಮಣಿಪುರದ ರಾಜಧಾನಿಯಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಣಿಪುರ ಸರ್ಕಾರ ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನೂ ಸ್ಥಗಿತಗೊಳಿಸಿದೆ.
ಬಿಷ್ಣುಪುರ ಜಿಲ್ಲೆಯಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದೆ. ನಾಯಕನ ಬಿಡುಗಡೆಗೆ ಒತ್ತಾಯಿಸಿ ಕ್ವಾಕಿಥೆಲ್ ಮತ್ತು ಉರಿಪೋಕ್‌ನಲ್ಲಿ ಪ್ರತಿಭಟನಾಕಾರರು ರಸ್ತೆಯ ಮಧ್ಯದಲ್ಲಿ ಟೈರ್‌ಗಳು ಮತ್ತು ಹಳೆಯ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಪರಿಸ್ಥಿತಿ ನಿಯಂತ್ರಿಸಲು ಈ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಹೀಗಾಗಿ, ರಾಜಭವನಕ್ಕೆ ತೆರಳುವ ರಸ್ತೆಗಳಲ್ಲಿಯೂ ಭದ್ರತೆ ಹೆಚ್ಚಿಸಲಾಗಿದೆ. ಕೇಂದ್ರ ಪಡೆಗಳ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಪ್ರಕ್ಷುಬ್ಧಗೊಂಡಿರುವ ಈಶಾನ್ಯ ರಾಜ್ಯದಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ, ಇಂಫಾಲ್ ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಶಾಂತಿ, ಸಾರ್ವಜನಿಕ ನೆಮ್ಮದಿಗೆ ಭಂಗ ತರುವ, ಗಲಭೆ ಅಥವಾ ಸಮಾಜ ವಿರೋಧಿ ಶಕ್ತಿಗಳ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಕ್ರಮ ವಹಿಸುವಂತೆ ಪೊಲೀಸರಿಗೆ ಆದೇಶಿಸಲಾಗಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 163ರ ಉಪ-ವಿಭಾಗ 2ರ ಅಡಿ ಐವರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಜನರು ಕೋಲು, ಕಲ್ಲು, ಬಂದೂಕುಗಳು ಅಥವಾ ಹರಿತವಾದ ಆಯುಧಗಳನ್ನು ಹಿಡಿದು ಓಡಾಡದಂತೆ ನಿರ್ಬಂಧಿಸಲಾಗಿದೆ. ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಮುಂದಿನ ಆದೇಶದವರೆಗೆ ಯಾರೂ ಕೂಡ ಮನೆಗಳಿಂದ ಹೊರಬರದಂತೆ ಜನರಿಗೆ ನಿಷೇಧ ಹೇರಲಾಗಿದೆ.
ರಾಜಧಾನಿ ಇಂಫಾಲ್ನ ವಿವಿಧೆಡೆ ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದರು. ಇಂಫಾಲ್ ಪೂರ್ವ ಜಿಲ್ಲೆಯ ಖುರೈ ಲ್ಯಾಮ್ಲಾಂಗ್‌ನಲ್ಲಿ ಉದ್ರಿಕ್ತ ಜನಸಮೂಹವು ಬಸ್‌ಗೆ ಬೆಂಕಿ ಹಚ್ಚಿದೆ. ಕ್ವಾಕಿಥೆಲ್‌ನಲ್ಲಿ ಹಲವು ಬಾರಿ ಗುಂಡು ಹಾರಿಸಿದ ಶಬ್ದಗಳು ಕೇಳಿಬಂದಿವೆ. ಆದರೆ ಗುಂಡು ಹಾರಿಸಿದವರು ಯಾರೆಂಬುದು ಖಚಿತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ನಾಯಕನನ್ನು ರಾಜ್ಯದಿಂದ ಹೊರಗೆ ಕರೆದೊಯ್ಯಲಾಗುವುದು ಎಂಬ ಅನಧಿಕೃತ ವರದಿಗಳು ಹರಡಿದ ಬೆನ್ನಲ್ಲೇ, ಪ್ರತಿಭಟನಾಕಾರರು ತುಲಿಹಾಲ್‌ನಲ್ಲಿರುವ ಇಂಫಾಲ್ ವಿಮಾನ ನಿಲ್ದಾಣದ ಗೇಟ್‌ಗೆ ಮುತ್ತಿಗೆ ಹಾಕಿದ್ದರು. ಬಂಧಿತ ನಾಯಕನನ್ನು ರಾಜ್ಯದ ಹೊರಗೆ ಕರೆದೊಯ್ಯುವ ಯಾವುದೇ ಸಂಭಾವ್ಯ ಪ್ರಯತ್ನ ತಡೆಯಲು ಜನರು ವಿಮಾನ ನಿಲ್ದಾಣ ರಸ್ತೆಯ ಉದ್ದಕ್ಕೂ ಬೀದಿಗಿಳಿದು ರಸ್ತೆ ಮೇಲೆ ಮಲಗಿದರು. ಬಂಧನದ ವಿರುದ್ಧ ಸಾಂಕೇತಿಕ ಪ್ರತಿಭಟನೆಯಲ್ಲಿ ಅರಾಂಬೈ ಟೆಂಗೋಲ್ ಸದಸ್ಯರು ತಮ್ಮ ಮೇಲೆ ಪೆಟ್ರೋಲ್ ಸುರಿದುಕೊಂಡರು. ಶನಿವಾರ ರಾತ್ರಿ 11.45ರಿಂದ ಜಾರಿಗೆ ಬರುವಂತೆ 5 ಜಿಲ್ಲೆಗಳ ಪ್ರಾದೇಶಿಕ ವ್ಯಾಪ್ತಿಯಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಐದು ದಿನಗಳವರೆಗೆ ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.