ಹೈದರಾಬಾದ್: ಅಮೆರಿಕದ ಖ್ಯಾತ ಉದ್ಯಮಿ ಹಾಗೂ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಕಂಪನಿಯು ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳನ್ನು ನೀಡಲು ಅಧಿಕೃತವಾಗಿ ಪರವಾನಗಿ ಪಡೆದಿದೆ. ಭಾರತದಲ್ಲಿ ತ್ವರಿತ ವೇಗದ ಇಂಟರ್‌ನೆಟ್ ನೀಡುವ ಯೋಜನೆ ಇದಾಗಿದ್ದು, ಸ್ಯಾಟ್‌ಕಾಮ್ ಪರವಾನಗಿ ಪಡೆದ ಮೂರನೇ ಕಂಪನಿ ಇದಾಗಿದೆ. ಇದಕ್ಕೂ ಮುನ್ನ ಜಿಯೋ ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಮತ್ತು ಭಾರ್ತಿ ಏರ್‌ಟೆಲ್ ಬೆಂಬಲಿತ ಯುಟೆಲ್‌ಸ್ಯಾಟ್ ಒನ್‌ವೆಬ್ ಸ್ಯಾಟ್‌ಕಾಮ್ ಪರವಾನಗಿ ಪಡೆದಿದ್ದವು. ಈ ಪಟ್ಟಿಗೆ ಸ್ಟಾರ್‌ಲಿಂಕ್ ಕಂಪನಿ ಕೂಡ ಸೇರಿಕೊಂಡಿತು. ಮೂರು ವರ್ಷಗಳ ಬಳಿಕ ಟೆಲಿಕಾಂ ಇಲಾಖೆ (DoT) ಅಂತಿಮವಾಗಿ ಸ್ಟಾರ್‌ಲಿಂಕ್ ಕಂಪನಿಗೆ ಭಾರತದಲ್ಲಿ ತನ್ನ ಸ್ಯಾಟ್‌ಕಾಮ್ ಸೇವೆಯನ್ನು ಪ್ರಾರಂಭಿಸಲು ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯುನಿಕೇಷನ್ ಬೈ ಸ್ಯಾಟಲೈಟ್ (GMPCS) ಪರವಾನಗಿಯನ್ನು ನೀಡಿದೆ.
ಮುಂದಿನ ಎರಡು ವಾರಗಳಲ್ಲಿ ಪ್ರಾಯೋಗಿಕ ಸ್ಪೆಕ್ಟ್ರಮ್ ಪಡೆಯುವ ನಿರೀಕ್ಷೆಯಿದೆ ಎಂದು ಹಿರಿಯ DoT ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಹಾಗೂ ಈ ಪರವಾನಗಿಯೊಂದಿಗೆ ಸ್ಟಾರ್‌ಲಿಂಕ್ ಭಾರತದಲ್ಲಿ ತನ್ನ ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಪ್ರಾರಂಭಿಸಲು ಸಜ್ಜಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಭಾರತೀಯ ಬಾಹ್ಯಾಕಾಶ ನಿಯಂತ್ರಕ ಸಂಸ್ಥೆಯಾದ ಇನ್-ಸ್ಪೇಸ್‌ನಿಂದ ತನ್ನ ಉಪಗ್ರಹಗಳನ್ನು ನಿರ್ವಹಿಸಲು ಸ್ಟಾರ್‌ಲಿಂಕ್‌ಗೆ ಅಂತಿಮ ಅನುಮತಿ ಮಾತ್ರ ಬಾಗಿ ಇದೆ. ಕಂಪನಿಯು ವಾಣಿಜ್ಯ ಸೇವೆಗಳನ್ನು ಪ್ರಾರಂಭಿಸುವುದಕ್ಕೂ ಮುನ್ನ ಇದೊಂದು ನಿರ್ಣಾಯಕ ಹೆಜ್ಜೆಯಾಗಿದೆ. ಹಾಗಾಗಿ ಕಂಪನಿಯು ಕೇಂದ್ರ ಕೇಳಿರುವ ಅಗತ್ಯ ಭದ್ರತಾ ದಾಖಲೆಗಳನ್ನು ಶೀಘ್ರದಲ್ಲೇ ಸಲ್ಲಿಸಲಿದೆ. ಇನ್-ಸ್ಪೇಸ್‌ನಿಂದ ಅನುಮೋದನೆ ಪಡೆದ ನಂತರ, ಸ್ಟಾರ್‌ಲಿಂಕ್ ತಾತ್ಕಾಲಿಕ ಸ್ಪೆಕ್ಟ್ರಮ್ ಹಂಚಿಕೆ ಪಡೆಯುವ ನಿರೀಕ್ಷೆಯಿದೆ ಎಂಬ ಮಾಹಿತಿ ಇದೆ.
ಸ್ಪೇಸ್‌ಎಕ್ಸ್ ನಿರ್ವಹಿಸುವ ಸ್ಟಾರ್‌ಲಿಂಕ್ ಕಂಪನಿಯು ಕಳೆದ 3-4 ವರ್ಷಗಳಿಂದ ಭಾರತದಲ್ಲಿ ತನ್ನ ಉಪಗ್ರಹ ಸೇವೆ ಪ್ರಾರಂಭಿಸಲು ಪ್ರಯತ್ನ ನಡೆಸುತ್ತಿತ್ತು. ಆದರೆ, ಕೆಲವು ಅಡೆತಡೆಗಳಿಂದಾಗಿ ಅದು ತನ್ನ ಪ್ರಯತ್ನವನ್ನು ನಿಲ್ಲಿಸಬೇಕಾಗಿತ್ತು. ಈಗ ಅಂತಿಮವಾಗಿ ಪರವಾನಗಿ ಪಡೆದಿದ್ದು, ದೂರಸಂಪರ್ಕ ಇಲಾಖೆ ವಿಧಿಸಿರುವ ಹೊಸ ಷರತ್ತುಗಳನ್ನು ಸ್ವೀಕರಿಸಲು ಮತ್ತು ಕಾನೂನಿನ ಪ್ರಕಾರ ಶುಲ್ಕವನ್ನು ಪಾವತಿಸಲು ಕಂಪನಿ ಒಪ್ಪಿಕೊಂಡಿದೆ. ಕಳೆದ ತಿಂಗಳು, ಮಸ್ಕ್ ಅವರ ಉಪಗ್ರಹ ಇಂಟರ್ನೆಟ್ ಸೇವೆಯು DoT ಯಿಂದ ಲೆಟರ್ ಆಫ್ ಇಂಟೆಂಟ್ (LoI) ಅನ್ನು ಪಡೆದುಕೊಂಡಿದ್ದು, ಉಪಗ್ರಹ ಸಂವಹನಕ್ಕಾಗಿ ಭದ್ರತಾ ಮಾನದಂಡಗಳಿಗೆ ಒಪ್ಪಿಗೆ ಕೂಡ ನೀಡಿದೆ. ಇನ್ನು ಜಿಯೋ ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಮತ್ತು ಯುಟೆಲ್‌ಸ್ಯಾಟ್ ಒನ್‌ವೆಬ್ ಎರಡೂ ತಮ್ಮ ಪರವಾನಗಿಗಳನ್ನು ಬಹಳ ಹಿಂದೆಯೇ ಪಡೆದಿದ್ದರೂ, ಅವು ಇನ್ನೂ ರೇಡಿಯೋ ತರಂಗ ಆವರ್ತನಗಳ ಹಂಚಿಕೆಗಾಗಿ ಕಾಯುತ್ತಿವೆ. ಕಾರಣ TRAIನ ಶಿಫಾರಸುಗಳನ್ನು DoT ಇನ್ನೂ ಅನುಮೋದಿಸದ ಕಾರಣ ಸ್ಯಾಟ್‌ಕಾಮ್ ಸ್ಪೆಕ್ಟ್ರಮ್ ಹಂಚಿಕೆಗಾಗಿ ನಿರೀಕ್ಷಿಲಾಗಿದೆ. ಇದು ಉಪಗ್ರಹ ಸಂವಹನ ಪೂರೈಕೆದಾರರಿಗೆ ಸ್ಪೆಕ್ಟ್ರಮ್ ಹಂಚಿಕೆ ಮತ್ತು ಸ್ಪೆಕ್ಟ್ರಮ್ ಬಳಕೆಯ ಮೇಲೆ ಶೇ.4ರಷ್ಟು AGR ವಿಧಿಸುವ ಪ್ರಸ್ತಾಪ ಹೊಂದಿದೆ.