ಯುಎಸ್ಎ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ವಿವಾದಿತ ನಿರ್ಧಾರಕ್ಕೆ ಕೈ ಹಾಕಿದ್ದಾರೆ. ವಿಶ್ವದ 12 ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧ ಮತ್ತು 7 ದೇಶಗಳ ಮೇಲೆ ಭಾಗಶಃ ನಿರ್ಬಂಧ ವಿಧಿಸಿದ್ದು, ದೇಶದ ಭದ್ರತೆ, ಸಾರ್ವಜನಿಕರ ಸುರಕ್ಷತೆ ಮತ್ತು ವಿದೇಶಿ ಉಗ್ರ ಶಕ್ತಿಗಳಿಂದ ರಕ್ಷಣೆಯ ದೃಷ್ಟಿಯಿಂದ ಅಫ್ಘಾನಿಸ್ತಾನ, ಮ್ಯಾನ್ಮಾರ್, ಚಾಡ್, ಕಾಂಗೋ ಗಣರಾಜ್ಯ, ಈಕ್ವಟೋರಿಯಲ್ ಗಿನಿಯಾ, ಎರಿಟ್ರಿಯಾ, ಹೈಟಿ, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್ ಮತ್ತು ಯೆಮೆನ್ ರಾಷ್ಟ್ರಗಳ ಪ್ರಜೆಗಳು ಅಮೆರಿಕ ಪ್ರವೇಶವನ್ನ ಸಂಪೂರ್ಣವಾಗಿ ನಿಷೇಧಿಸುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ.
ಇದರ ಜೊತೆಗೆ, ಬುರುಂಡಿ, ಕ್ಯೂಬಾ, ಲಾವೋಸ್, ಸಿಯೆರಾ ಲಿಯೋನ್, ಟೋಗೊ, ತುರ್ಕಮೆನಿಸ್ತಾನ್ ಮತ್ತು ವೆನೆಜುವೆಲಾದ ರಾಷ್ಟ್ರಗಳ ಪ್ರಜೆಗಳು ಅಮೆರಿಕ ಪ್ರವೇಶಕ್ಕೆ ಭಾಗಶಃ ನಿರ್ಬಂಧ ವಿಧಿಸಲಾಗಿದೆ. ಇದು ವಲಸಿಗರು ಮತ್ತು ವಲಸಿಗರಲ್ಲದವರು ಎಂಬುದಾಗಿ ಪ್ರತ್ಯೇಕಿಸಲಾಗುತ್ತದೆ ಎಂದು ಶ್ವೇತಭವನ ತಿಳಿಸಿದೆ. "ನನ್ನ ಮೊದಲ ಅವಧಿಯ ಆಡಳಿತದಲ್ಲಿ ಈ ದೇಶಗಳ ನಾಗರಿಕರ ಮೇಲೆ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ಹೇರಿದ್ದೆ. ಆ ದೇಶಗಳಲ್ಲಿ ಉಗ್ರವಾದ ಚಟುವಟಿಕೆಗಳು ನಿಲ್ಲದ ಕಾರಣ, ನಮ್ಮ ನಾಗರಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಯೋತ್ಪಾದಕ ದಾಳಿ ನಡೆಸುವ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ, ದ್ವೇಷಪೂರಿತ ಸಿದ್ಧಾಂತ ಪ್ರತಿಪಾದಿಸುವ, ದುರುದ್ದೇಶಗಳಿಗೆ ವಲಸೆ ಕಾನೂನುಗಳನ್ನು ಬಳಸಿಕೊಳ್ಳುವ ವಿದೇಶಿಯರಿಂದ ತನ್ನ ನಾಗರಿಕರನ್ನು ರಕ್ಷಿಸುವುದು ಅಮೆರಿಕದ ನೀತಿಯಾಗಿದೆ" ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ವಿದೇಶಿಯರು ಅಮೆರಿಕ ಪ್ರವೇಶಿಸುವ ಮೊದಲು ದೇಶ ಮತ್ತು ಅದರ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹಾನಿ ಮಾಡುವ ಉದ್ದೇಶ ಹೊಂದಿಲ್ಲ ಎಂಬುದು ಖಚಿತವಾದ ಬಳಿಕ ಅಂತವರಿಗೆ ಅನುಮತಿ ನೀಡಬೇಕು. ವೀಸಾ ನೀಡುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಸೂಚಿಸಿದ್ದಾರೆ.