ಛತ್ತೀಸ್ಗಢ : ಛತ್ತೀಸ್ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ತೀವ್ರಗೊಳಿಸಿರುವ ಭದ್ರತಾ ಪಡೆಗಳು ಮತ್ತೋರ್ವ ಪ್ರಮುಖ ಮಾವೋವಾದಿ ನಾಯಕನನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿವೆ. ಬಿಜಾಪುರ ಜಿಲ್ಲೆಯಲ್ಲಿ ಉನ್ನತ ನಕ್ಸಲ್ ನಾಯಕ ಮತ್ತು ಕೇಂದ್ರ ಸಮಿತಿ ಸದಸ್ಯನಾಗಿದ್ದ (ಸಿಸಿಎಂ) ಸುಧಾಕರ್ ಅಲಿಯಾಸ್ ಗೌತಮ್ ಸಾವನ್ನಪ್ಪಿದ್ದಾನೆ ಎಂದು ಬಸ್ತಾರ್‌ನ ಇನ್ಸ್‌ಪೆಕ್ಟರ್ ಜನರಲ್ ಪಿ.ಸುಂದರರಾಜ್ ಮಾಹಿತಿ ನೀಡಿದ್ದಾರೆ.
ಜೂನ್ 5ರಂದು ಬಿಜಾಪುರದ ರಾಷ್ಟ್ರೀಯ ಅರಣ್ಯ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳು ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ನಾಯಕ ಸುಧಾಕರ್ ಅವರನ್ನು ಹತ್ಯೆ ಮಾಡಿವೆ. ಮೂರು ವಾರಗಳ ಹಿಂದೆ, ಮೇ 21ರಂದು, ನಾರಾಯಣಪುರ ಜಿಲ್ಲೆಯ ಅಬುಜ್‌ಮರ್ ಪ್ರದೇಶದಲ್ಲಿ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 26 ನಕ್ಸಲರನ್ನು ಹತ್ಯೆ ಮಾಡಲಾಗಿತ್ತು. ಈ ಈ ಕಾರ್ಯಾಚರಣೆಯಲ್ಲಿ, ಸಿಪಿಐ (ಮಾವೋವಾದಿ) ಪ್ರಧಾನ ಕಾರ್ಯದರ್ಶಿ ಬಸವರಾಜು ಕೂಡ ಸಾವನ್ನಪ್ಪಿದ್ದ.
ಇದೀಗ ಬಿಜಾಪುರ ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಸುಧಾಕರ್ನನ್ನು ಹತ್ಯೆ ಮಾಡಲಾಗಿದೆ. ಹಿರಿಯ ಮಾವೋವಾದಿ ಕಾರ್ಯಕರ್ತರು ಮತ್ತು ಪಿಎಲ್‌ಜಿ ಕಾರ್ಯಕರ್ತರು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಎಸ್‌ಟಿಎಫ್, ಡಿಆರ್‌ಜಿ ಮತ್ತು ಕೋಬ್ರಾ ತಂಡಗಳು ಜಂಟಿ ಕಾರ್ಯಾಚರಣೆಗೆ ಮುಂದಾಗುತ್ತಿದ್ದಂತೆ ಗುಂಡಿನ ಚಕಮಕಿ ಆರಂಭವಾಯಿತು. ಈ ವೇಳೆ ನಕ್ಸಲ್ ನಾಯಕ ಸುಧಾಕರ್ ಸಾವನ್ನಪ್ಪಿದ್ದು, ಮೃತದೇಹದ ಜೊತೆಗೆ ಎಕೆ 47 ಶಸ್ತ್ರಾಸ್ತ್ರ ಮತ್ತು ದೊಡ್ಡ ಪ್ರಮಾಣದ ಸ್ಫೋಟಕ ವಸ್ತುಗಳು ಮತ್ತು ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.