ಅಯೋಧ್ಯೆ: ಇಲ್ಲಿನ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಮೊದಲ ಮಹಡಿಯಲ್ಲಿನ ರಾಮ ದರ್ಬಾರ್ ಅನಾವರಣ ಹಾಗೂ ರಾಜಾ ರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳ ಆಚರಣೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗಿಯಾದರು. ದೇಗುಲದಲ್ಲಿ ನಡೆದ ಎರಡನೇ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಇದಾಗಿದೆ. ಮೊದಲ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ 2024ರ ಜನವರಿ 22ರಂದು ರಾಮ ಲಲ್ಲಾ ವಿಗ್ರಹಕ್ಕೆ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿದ್ದರು.
ಇಂದು ನಡೆದ ಕಾರ್ಯಕ್ರಮದ ಕುರಿತು ಮಾತನಾಡಿದ ಅಯೋಧ್ಯೆಯ ರಸಿಕ್ ನಿವಾಸ ದೇವಾಲಯದ ಪ್ರಧಾನ ಅರ್ಚಕ ಅನಿಲ್ ಮಿಶ್ರಾ, ಈ ವರ್ಷ ಗಂಗಾ ದಸರಾ ಪವಿತ್ರವಾಗಿರುವುದಲ್ಲದೆ ಐತಿಹಾಸಿಕವಾಗಿ ಉಳಿದಿದೆ. 500 ವರ್ಷಗಳ ಸುದೀರ್ಘ ಹೋರಾಟದ ಬಳಿಕ ರಾಜಾ ರಾಮನನ್ನು ಅಯೋಧ್ಯೆಯ ಭವ್ಯ ರಾಮ ಮಂದಿರದ ಮೊದಲ ಮಹಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಕಾರ್ಯಕ್ರಮವೂ ಉತ್ಸಾಹ, ಭಕ್ತಿ ಮತ್ತು ಆಧ್ಯಾತ್ಮದಿಂದ ಕೂಡಿತು. 11.25ರಿಂದ 11.40ರ ಸಮಯದಲ್ಲಿ ಈ ಪ್ರಾಣ ಪ್ರತಿಷ್ಠಾಪನೆ ಜರುಗಿತು ಎಂದು ವಿವರ ನೀಡಿದರು.
ಹಿಂದೂ ಪುರಾಣಗಳ ಪ್ರಕಾರ, ಗಂಗಾ ದಸರಾದ ದಿನದಿಂದ ಭಗೀರಥನ ತಪಸ್ಸಿನ ಫಲವಾಗಿ ಗಂಗಾ ನದಿ ಶಿವನ ಜಡೆಯಿಂದ ಕೆಳಗೆ ಇಳಿದು ಬಂದ ದಿನವಾಗಿದ್ದು, ಇದನ್ನು ಪವಿತ್ರ ದಿನವಾಗಿ ಪರಿಗಣಿಸಲಾಗಿದೆ. ಈ ಕುರಿತು ಮಾತನಾಡಿದ ಅಯೋಧ್ಯೆ ಮೂಲದ ಜ್ಯೋತಿಷಿ ಪಂಡಿತ್ ಕಲ್ಕಿ ರಾಮ್, ಗಂಗಾ ದಸರಾದ ದಿನದಂದು ಯಾವುದೇ ಪವಿತ್ರ ಕಾರ್ಯ ಮಾಡಿದರೂ ಅದು ಅನೇಕ ಪಟ್ಟು ಉತ್ತಮ ಫಲಿತಾಂಶ ನೀಡುತ್ತದೆ.
ಈ ಕಾರಣದಿಂದ ರಾಜರಾಮ ಪ್ರತಿಷ್ಟಾಪನೆಗೆ ರಾಮ ದೇಗುಲ ಟ್ರಸ್ಟ್ ಈ ದಿನವನ್ನು ಆರಿಸಿಕೊಂಡಿದೆ. ರಾಮ ದೇಗುಲದ ಸಂಕೀರ್ಣದೊಳಗಿನ ರಾಮ ದರ್ಬಾರ್ ಮುಖ್ಯ ದೇಗುಲದಲ್ಲಿ 8 ಇತರೆ ದೇಗುಲಗಳ ಪ್ರತಿಷ್ಠಾಪನೆ ನಡೆದಿದೆ ಎಂದರು. ಟ್ರಸ್ಟಿ ಅನಿಲ್ ಮಿಶ್ರಾ ಮಾತನಾಡಿ, ಎಲ್ಲಾ ಧಾರ್ಮಿಕ ಆಚರಣೆ ಮತ್ತು ವೈದಿಕ ಮಂತ್ರಘೋಷಗಳಿಂದಾಗಿ ಕಾರ್ಯಕ್ರಮ ನಡೆಸಲಾಗಿದ್ದು, ದೇಶದ ಎಲ್ಲಾ ಭಾಗದ ನುರಿತ ಬ್ರಾಹ್ಮಣರೂ ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಗಂಗಾ ದಸರಾ ಹೊಸ ಆರಂಭದ ಸಂಕೇತವಾಗಿದೆ. ಈ ಕ್ಷಣವೂ ಶತಮಾನಗಳ ಹೋರಾಟ, ನಂಬಿಕೆಯ ಫಲವಾಗಿದೆ.
ಈ ಕಾರ್ಯಕ್ರಮದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇಂದು ಶ್ರೀ ರಾಮ ಜನಿಸಿದ ಪವಿತ್ರ ಜನ್ಮಸ್ಥಳ ಅಯೋಧ್ಯೆ ಧಾಮದಲ್ಲಿ ಶ್ರೀ ರಾಮ ಜನ್ಮಭೂಮಿ ದೇಗುಲದ ಮೊದಲ ಮಹಡಿಯಲ್ಲಿ ಶ್ರೀ ರಾಮ ದರ್ಬಾರ್ ಸೇರಿ ಸೇರಿದಂತೆ 8 ದೇಗುಲಗಳಲ್ಲಿ ದೇವರ ಪ್ರಾಣ ಪ್ರತಿಷ್ಠಾಪನೆ ಸಾಗಲಿದೆ ಎಂದು ತಿಳಿಸಿದ್ದರು.