ನವದೆಹಲಿ: ಜುಲೈ 21 ರಿಂದ ಆಗಸ್ಟ್ 12ರವರೆಗೆ ಸಂಸತ್ ಮುಂಗಾರು ಅಧಿವೇಶನ ನಡೆಸಲು ಸಂಸದೀಯ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿಯು ಈ ನಿರ್ಧಾರ ತೆಗೆದುಕೊಂಡಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆಸಲಾದ ಸಮಿತಿಯನ್ನು ಈ ದಿನಾಂಕಗಳಿಗೆ ಶಿಫಾರಸು ಮಾಡಲಾಗಿದೆ ಎಂದರು. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯುವಂತೆ ಪ್ರತಿಪಕ್ಷಗಳ ಒತ್ತಾಯಿಸಿದ್ದವು. ಈ ನಡುವೆಯೇ ಇದೀಗ ಮುಂಗಾರು ಅಧಿವೇಶನದ ದಿನಾಂಕದ ಘೋಷಣೆ ಹೊರ ಬಿದ್ದಿದೆ.
ಇದೇ ಅಧಿವೇಶನದಲ್ಲಿ ಪ್ರತಿಪಕ್ಷಗಳು ಎಲ್ಲವನ್ನೂ ಚರ್ಚಿಸಬಹುದು: ಆಪರೇಷನ್ ಸಿಂಧೂರ್ ಕುರಿತು ಪ್ರತಿಪಕ್ಷಗಳು ವಿಶೇಷ ಅಧಿವೇಶನಕ್ಕೆ ಬೇಡಿಕೆ ಇಟ್ಟಿರುವ ಕುರಿತು ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಂಗಾರು ಅಧಿವೇಶನದಲ್ಲಿ ನಿಯಮಗಳ ಅಡಿ ಎಲ್ಲ ವಿಷಯಗಳನ್ನು ಚರ್ಚಿಸಬಹುದಾಗಿದೆ ಎಂದು ಹೇಳಿದ್ದಾರೆ. ಅಧಿವೇಶನ ಪ್ರಮಾಣಿತ ಸಮಯದಿಂದ ಯಾವುದೇ ಬದಲಾವಣೆ ಇಲ್ಲ. ರಾಜ್ಯಸಭೆ ಎರಡೂ ಬೆಳಗ್ಗೆ 11 ಗಂಟೆಗೆ ಸಭೆ ಸೇರಲಿದೆ. ಮೂರು ತಿಂಗಳ ವಿರಾಮದ ನಂತರ ಸಂಸತ್ತಿನ ಪುನರಾರಂಭ ಆಗುತ್ತಿದೆ ಎಂದರು.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಚರ್ಚೆಗೆ ವಿರೋಧ ಪಕ್ಷಗಳು ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಈ ಬಾರಿ ಮುಂಗಾರು ಅಧಿವೇಶನ ಹೆಚ್ಚು ಕಾವೇರುವಂತೆ ಮಾಡುವುದಂತೂ ಸುಳ್ಳಲ್ಲ. ವಿಶೇಷ ಅಧಿವೇಶನ ಸಂಬಂಧ 16 ಪ್ರತಿಪಕ್ಷಗಳು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಭಾರತದ ಆಪರೇಷನ್ ಸಿಂಧೂರ್ ಬಗ್ಗೆ ಚರ್ಚಿಸಲು, ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸಿದ್ದವು. ವಿಶೇಷ ಅಧಿವೇಶನದ ಹೊರತಾಗಿ ಸರ್ಕಾರ ಇದೀಗ ಸಾಮಾನ್ಯ ಮುಂಗಾರು ಅಧಿವೇಶನ ಕುರಿತು ಔಪಚಾರಿಕೆ ಘೋಷಣೆ ಮಾಡಿದ್ದು, ಜುಲೈ 21ರಿಂದ ಆಗಸ್ಟ್ 12ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಜನವರಿ 31ರಿಂದ ಏಪ್ರಿಲ್ 4ರವರೆಗೆ ನಡೆದ ಬಜೆಟ್ ಅಧಿವೇಶನ ಎರಡು ಹಂತದಲ್ಲಿ ನಡೆದಿತ್ತು. ಈ ಅಧಿವೇಶದಲ್ಲಿ ವಕ್ಫ್ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗಿತ್ತು. ಅಷ್ಟೇ ಅಲ್ಲ ರಾಷ್ಟ್ರಪತಿಗಳಿಂದ ಸಹಿ ಪಡೆದ ಮಸೂದೆ ಕಾನೂನು ಆಗಿದೆ. ಗೆಜೆಟ್ ಮತ್ತು ವಕ್ಫ್ (ತಿದ್ದುಪಡಿ) ಕಾಯ್ದೆ, 2025 ಮಸೂದೆಯು 2025ರ ಏಪ್ರಿಲ್ 8 ರಂದು ಜಾರಿಗೆ ಬಂದಿದೆ.