ಪಾಕಿಸ್ತಾನ : ಪಾಕಿಸ್ತಾನದಲ್ಲಿ ಪೊಲೀಸ್ ಆಡಳಿತ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕಳೆದ 24 ಗಂಟೆಯಲ್ಲಿ ಹಲವೆಡೆ ಭೂಕಂಪ ಸಂಭವಿಸಿದೆ. ಜೈಲಿನಲ್ಲಿದ್ದ ಕೈದಿಗಳ ರಕ್ಷಣೆಗಾಗಿ ಅವರನ್ನು ಬೇರೆಡೆ ಸ್ಥಳಾಂತರಿಸುವಾಗ 200ಕ್ಕೂ ಅಧಿಕ ಅಪರಾಧಿಗಳು ತಪ್ಪಿಸಿಕೊಂಡಿದ್ದಾರೆ. ಕರಾಚಿಯ ಮಾಲಿರ್ ಜೈಲಿನಲ್ಲಿ ಘಟನೆ ನಡೆದಿದೆ. ಕೈದಿಗಳು ಜೈಲಿನಿಂದ ತಪ್ಪಿಸಿಕೊಳ್ಳುವಾಗ ಒಬ್ಬ ಕೈದಿ ಸಾವನ್ನಪ್ಪಿದ್ದಾನೆ. ಅವರನ್ನು ತಡೆಯಲು ಮುಂದಾದ ಮೂವರು ಪ್ಯಾರಾಮಿಲಿಟರಿ ಮತ್ತು ಒಬ್ಬ ಜೈಲು ಸಿಬ್ಬಂದಿ ತೀವ್ರ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಮಾಧ್ಯಮ ವರದಿಗಳ ಪ್ರಕಾರ, ಕರಾಚಿ ಸೇರಿದಂತೆ ವಿವಿಧೆಡೆ ಭೂಕಂಪನ ಸಂಭವಿಸಿದೆ. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜೈಲಿನ ಬ್ಯಾರಕ್ಗಳಲ್ಲಿದ್ದ ಕೈದಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೇ ಬಳಸಿಕೊಂಡ 216 ಅಪರಾಧಿಗಳು ಜೈಲಿನಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಕಳೆದ 24 ಗಂಟೆಗಳಲ್ಲಿ ಕರಾಚಿಯಲ್ಲಿ ಸರಣಿ ಭೂಕಂಪಗಳು ಸಂಭವಿಸಿವೆ. ಕಂಪನದ ಸಮಯದಲ್ಲಿ 600ಕ್ಕೂ ಹೆಚ್ಚು ಕೈದಿಗಳನ್ನು ಅವರ ಬ್ಯಾರಕ್ಗಳಿಂದ ಹೊರಗೆ ಕರೆದೊಯ್ಯಲಾಯಿತು. ಅಪರಾಧಿಗಳು ಸಾಗಿಸುವಾಗಿನ ಅವ್ಯವಸ್ಥೆಯಿಂದ 216 ಕೈದಿಗಳು ಪರಾರಿಯಾಗಿದ್ದಾರೆ. ಅದರಲ್ಲಿ 80 ಕೈದಿಗಳನ್ನು ಮರಳಿ ವಶಕ್ಕೆ ಪಡೆಯಲಾಗಿದೆ" ಎಂದು ಜೈಲು ಸೂಪರಿಂಟೆಂಡೆಂಟ್ ಅರ್ಷದ್ ಶಾ ಹೇಳಿದ್ದಾರೆ.
"ಇನ್ನೂ 135ಕ್ಕೂ ಹೆಚ್ಚು ಕೈದಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯಗಳು ಮುಂದುವರೆದಿವೆ. ಪರಾರಿಯಾದವರ ಪತ್ತೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ" ಎಂದು ಅವರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಸಿಂಧ್ ಪ್ರಾಂತ್ಯದ ಗೃಹ ಸಚಿವ ಜಿಯಾ-ಉಲ್-ಹಸನ್ ಲಂಜಾರ್ ಮಾತನಾಡಿದ್ದು, "ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಗಂಭೀರ ಜೈಲು ಪರಾರಿ ಇದಾಗಿದೆ. 216 ಕೈದಿಗಳು ಏಕಕಾಲದಲ್ಲಿ ಜೈಲಿನಿಂದ ಪರಾರಿಯಾಗಿದ್ದು, ನಿಜಕ್ಕೂ ಕಳವಳಕಾರಿ" ಎಂದಿದ್ದಾರೆ.
ಘಟನೆಯ ವೇಳೆ ಮಾಲಿರ್ ಜೈಲಿನಲ್ಲಿ 6 ಸಾವಿರಕ್ಕೂ ಹೆಚ್ಚು ಕೈದಿಗಳಿದ್ದರು. ಅವರಲ್ಲಿ ಹೆಚ್ಚಿನವರು ಮಾದಕವಸ್ತು ಸಂಬಂಧಿತ ಪ್ರಕರಣಗಳಲ್ಲಿ ಭಾಗಿಯಾಗಿದ್ದವ. ಗಂಭೀರ ಆರೋಪ ಹೊತ್ತಿರುವ ಕೈದಿಗಳೇ ಜೈಲಿನಿಂದ ಪರಾರಿಯಾಗಿದ್ದಾರೆ ಎಂದು ಜೈಲು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ವರದಿ ಭಿತ್ತರವಾಗಿವೆ. ಪಾಕಿಸ್ತಾನ ಹವಾಮಾನ ಇಲಾಖೆಯ (ಪಿಎಂಡಿ) ಭೂಕಂಪನ ಮಾನಿಟರಿಂಗ್ ಸೆಂಟರ್ ಪ್ರಕಾರ, ಕರಾಚಿಯಲ್ಲಿ ಭಾನುವಾರದಿಂದ 16 ಲಘು ಭೂಕಂಪಗಳು ಸಂಭವಿಸಿವೆ.