ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಮತ್ತೆ ಕಾಡು ಪ್ರಾಣಿಗಳ ಭೀತಿ ಮತ್ತೆ ಆರಂಭವಾಗಿದೆ. ತಡರಾತ್ರಿ ಮನೆಯಲ್ಲಿ ತನ್ನ ತಾಯಿಯ ಪಕ್ಕದಲ್ಲಿ ಮಲಗಿದ್ದ 2 ವರ್ಷದ ಮಗುವನ್ನು ತೋಳವೊಂದು ಹೊತ್ತೊಯ್ದಿದೆ. ಮಗು ಇಲ್ಲದೇ ಇರುವುದನ್ನು ನೋಡಿದ ಕುಟುಂಬ ಸದಸ್ಯರು ತಡರಾತ್ರಿಯವರೆಗೆ ಹುಡುಕಾಟ ನಡೆಸಿದ್ದರು. ಆದರೆ ಪತ್ತೆಯಾಗಿರಲಿಲ್ಲ. ಬೆಳಗ್ಗೆ ಕಬ್ಬಿನ ಹೊಲದಲ್ಲಿ ಮಗುವಿನ ಶವ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೂರು ತೋಳಗಳು ಶವ ತಿನ್ನುತ್ತಿದ್ದವು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಮಗುವಿನ ಕಂಡ ನಂತರ ಕುಟುಂಬ ಸದಸ್ಯರು ಭಯಭೀತರಾಗಿದ್ದರು. ಪೊಲೀಸರು ಮತ್ತು ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ತಲುಪಿ, ಮಗುವಿನ ಶವ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ.
ಫಖರ್‌ಪುರ ಪೊಲೀಸ್ ಠಾಣೆ ಪ್ರದೇಶದ ಕೊತ್ವಾಲ್ ಕಲಾ ನಿವಾಸಿ ಖುಷ್ಬೂ ತನ್ನ ಇಬ್ಬರು ಮಕ್ಕಳಾದ ನೇಹಾ ಮತ್ತು ಆಯುಷ್ ಅವರೊಂದಿಗೆ ಹಾರ್ಡಿ ಪೊಲೀಸ್ ಠಾಣೆ ಪ್ರದೇಶದ ಗಧಿಪೂರ್ವ ಗದಮರ್ ಕಲಾದಲ್ಲಿರುವ ತಮ್ಮ ತಾಯಿ ಮನೆಗೆ ಬಂದಿದ್ದರು. ಸೋಮವಾರ ರಾತ್ರಿ ತಡವಾಗಿ ಊಟ ಮಾಡಿದ ನಂತರ ಎಲ್ಲರೂ ಮಲಗಲು ಹೋಗಿದ್ದರು. ರಾತ್ರಿ ಖುಷ್ಬೂ ಎಚ್ಚರವಾದಾಗ, ಎರಡು ವರ್ಷದ ಆಯುಷ್ ಹಾಸಿಗೆಯಿಂದ ಕಾಣೆಯಾಗಿದ್ದ. ಇದರಿಂದ ತಾಯಿ ತನ್ನ ಮಗು ಕಾಣುತ್ತಿಲ್ಲ ಎಂದು ರೋದಿಸಲು ಶುರು ಮಾಡಿದ್ದರು. ಗ್ರಾಮಸ್ಥರು ಮತ್ತು ಇತರರು ಜಮಾಯಿಸಿ ಮಗುವನ್ನು ಹುಡುಕಲು ಪ್ರಾರಂಭಿಸಿದ್ದರು. ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ತಡರಾತ್ರಿಯವರೆಗೂ ಪೊಲೀಸರು ನೆರೆಹೊರೆಯಲ್ಲಿ ಹುಡುಕುತ್ತಲೇ ಇದ್ದರು ಆದರೆ ಮಗು ಪತ್ತೆಯಾಗಿರಲಿಲ್ಲ.
ಮರುದಿನ ಕಬ್ಬಿನ ಗದ್ದೆಯಲ್ಲಿ ಮಗುವಿನ ಶವವನ್ನು ಮೂರು ತೋಳಗಳು ತಿನ್ನುತ್ತಿವೆ ಎಂದು ತಿಳಿದುಬಂದಿತ್ತು. ಮೂರೂ ತೋಳಗಳು ಸೇರಿಕೊಂಡು ಮಗುವಿನ ಎರಡೂ ಕೈಗಳು ಮತ್ತು ಒಂದು ಕಾಲನ್ನು ತಿಂದು ಹಾಕಿದ್ದವು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಶವವನ್ನು ನೋಡಿದಾಗ ಕುಟುಂಬ ಸದಸ್ಯರ ದುಃಖದ ಕಟ್ಟೆ ಒಡೆದಿತ್ತು. ಈ ವೇಳೆ, ಸ್ಥಳದಲ್ಲಿ ಭಾರಿ ಜನಸಮೂಹ ಕೂಡ ಜಮಾಯಿಸಿತ್ತು. ವಿಷಯ ತಿಳಿದು ವಿಭಾಗೀಯ ಅರಣ್ಯ ಅಧಿಕಾರಿ ಅಜಿತ್ ಪ್ರತಾಪ್ ಸಿಂಗ್ ಕೂಡ ಸ್ಥಳಕ್ಕೆ ಆಗಮಿಸಿ, ಡ್ರೋನ್ ಮೂಲಕ ಇಡೀ ಪ್ರದೇಶವನ್ನು ಮೇಲ್ವಿಚಾರಣೆ ಮಾಡಿದರು. ಇದು ಯಾವುದೋ ಕಾಡು ಪ್ರಾಣಿ ದಾಳಿ ಮಾಡಿದಂತೆ ತೋರುತ್ತಿದೆ ಎಂದು ಅವರು ಹೇಳಿದರು. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.