ಉತ್ತರ ಪ್ರದೇಶ : ಅಗ್ನಿವೀರ್ಗಳಾಗಿ ಸೇನೆಯಲ್ಲಿ ಕಾರ್ಯನಿರ್ವಹಿಸಿದವರಿಗೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ತನ್ನ ನೇಮಕಾತಿಯಲ್ಲಿ ಶೇ 20ರಷ್ಟು ಮೀಸಲಾತಿ ನೀಡಲಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಈ ಕುರಿತು ಸಿಎಂ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ, ಅಗ್ನಿಪಥ್ ಯೋಜನೆಯಡಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಗ್ನಿವೀರ್ಗಳಿಗೆ ಪೊಲೀಸ್ ಇಲಾಖೆಯಲ್ಲಿ ಅವಕಾಶ ಒದಗಿಸುವ ಗುರಿ ಹೊಂದಿದ್ದೇವೆ ಎಂದರು.
ಇದೊಂದು ಅರ್ಥಪೂರ್ಣ ನಿರ್ಧಾರ. ಈ ಮೀಸಲಾತಿ ಸಾಮಾನ್ಯ, ಪ.ಜಾ, ಪ.ಪಂ ಮತ್ತು ಓಬಿಸಿ ಸೇರಿದಂತೆ ಎಲ್ಲಾ ವರ್ಗಗಳಿಗೆ ಅನ್ವಯವಾಗುತ್ತದೆ. ಅಗ್ನಿವೀರ್ ಒಬ್ಬರೂ ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿದ್ದರೆ, ಅವರಿಗೆ ಪರಿಶಿಷ್ಟ ಜಾತಿ ಅಡಿಯಲ್ಲಿಯೇ ಮೀಸಲಾತಿ ನೀಡಲಾಗುವುದು, ಓಬಿಸಿಗಳಿಗೆ ಓಬಿಸಿ ಅಡಿಯಲ್ಲಿಯೇ ಮೀಸಲಾತಿ ನೀಡಲಾಗುವುದು ಎಂದು ಅವರು ವಿವರಿಸಿದರು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಗ್ನಿವೀರರಿಗೆ 3 ವರ್ಷಗಳವರೆಗೆ ವಿಶೇಷ ವಯೋಮಿತಿ ಸಡಿಲಿಕೆ ನೀಡಲಾಗುವುದು. ಪೊಲೀಸ್ ಕಾನ್‌ಸ್ಟೆಬಲ್, ಪಿಎಸಿ, ಅಗ್ನಿಶಾಮಕ ದಳದ ನಾಲ್ಕು ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ ಎಂದು ಸಚಿವರು ಹೇಳಿದರು.
ಮೀಸಲಾತಿ ವ್ಯವಸ್ಥೆಯಡಿಯಲ್ಲಿ ಮೊದಲ ಬ್ಯಾಚ್‌ನ ನೇಮಕಾತಿಗಳು 2026ರಲ್ಲಿ ನಡೆಯಲಿದೆ. ಅಗ್ನಿವೀರರಿಗೆ ಮೀಸಲಾತಿ ಒದಗಿಸಲು ಹಲವಾರು ರಾಜ್ಯಗಳು ಮತ್ತು ಕೇಂದ್ರ ಪಡೆಗಳು ಈಗಾಗಲೇ ಕ್ರಮ ಕೈಗೊಂಡಿವೆ. ಹರಿಯಾಣ ಮತ್ತು ಒಡಿಶಾ ಮಾಜಿ ಅಗ್ನಿವೀರರಿಗೆ ಶೇ 10ರಷ್ಟು ಮೀಸಲಾತಿ ನೀಡಿದೆ. ಉತ್ತರ ಪ್ರದೇಶ ಸಚಿವ ಸಂಪುಟ ಈಗ ಶೇ 20ರಷ್ಟು ಮೀಸಲಾತಿ ನೀಡಲು ಅನುಮೋದಿಸಿದೆ.