ಗುವಾಹಟಿ: ಅಸ್ಸೋಂನಲ್ಲಿ ಭಾರೀ ಮಳೆಯಿಂದ ಮತ್ತಿಬ್ಬರು ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆ 20ಕ್ಕೆ ಏರಿದ್ದು, 20 ಜಿಲ್ಲೆಗಳಲ್ಲಿ ಸುಮಾರು 4 ಲಕ್ಷ ಮಂದಿ ನಿರಾಶ್ರಿತರಾಗಿದ್ದು, 7 ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದೆ ಎಂದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರಾಜ್ಯ ಸೇರಿದಂತೆ ನೆರೆಯ ರಾಜ್ಯದಲ್ಲೂ ನಿರಂತರ ಮಳೆಯಾಗುತ್ತಿರುವುದರಿಂದ ತಗ್ಗು ಪ್ರದೇಶ ಮತ್ತು ನದಿ ದಂಡೆ ಪ್ರದೇಶಗಳಲ್ಲಿ ಪ್ರವಾಹ ನಿರ್ಮಾಣವಾಗಿದ್ದು, ಈ ಪ್ರದೇಶದಲ್ಲಿ ವಾಸಿಸುವ ಜನರು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಎಚ್ಚರಿಸಿದ್ದಾರೆ.
ರಾಜ್ಯದ ಸ್ಥಿತಿಗತಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಶರ್ಮಾ ಅವರಿಗೆ ಕರೆ ಮಾಡಿ, ಪರಿಸ್ಥಿತಿ ಮಾಹಿತಿ ಪಡೆದಿದ್ದಾರೆ. ಅಗತ್ಯವಿರುವ ಎಲ್ಲಾ ಸಹಾಯ ನೀಡುವ ಭರವಸೆ ನೀಡಲಾಗಿದೆ. ಇನ್ನು ಸಂತ್ರಸ್ತರ ರಕ್ಷಣೆಗೆ ಹಲವಾರು ಸಂಸ್ಥೆಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ನಿರತವಾಗಿವೆ. ಅಸ್ಸೋಂ-ಅರುಣಾಚಲ ಪ್ರದೇಶ ಗಡಿಯಲ್ಲಿ ಸಿಲುಕಿದ 14 ಮಂದಿಯನ್ನು ಐಎಎಫ್ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. ಗುವಾಹಟಿಯಲ್ಲಿ ಇತ್ತೀಚಿಗೆ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದ ಐದು ಜನರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದೆ. ಕಳೆದ 24 ಗಂಟೆಗಳಲ್ಲಿ ಕ್ಯಾಚರ್ ಮತ್ತು ಶ್ರೀಭೂಮಿ ಜಿಲ್ಲೆಗಳಲ್ಲಿ ತಲಾ ಒಂದು ಸಾವು ವರದಿಯಾಗಿದೆ ಎಂದು ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ರಾಜ್ಯದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 10ಕ್ಕೆ ಏರಿದ್ದು, 19 ಜಿಲ್ಲೆಗಳ 3.5 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ. ಕ್ಯಾಚರ್‌ನಲ್ಲಿ 1 ಲಕ್ಷಕೂ ಹೆಚ್ಚು ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ. ಶ್ರೀಭೂಮಿಯಲ್ಲಿ 83 ಸಾವಿರ ಜನರು ಮತ್ತು ನಾಗಾಂವ್‌ನಲ್ಲಿ 62 ಸಾವಿರ ಜನರು ಬಾಧಿತರಾಗಿದ್ದಾರೆ. ಕ್ಯಾಚರ್ ಜಿಲ್ಲೆಯಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಬಂದ್ ಆಗಿವೆ. 3,524.38 ಹೆಕ್ಟೇರ್ ಬೆಳೆ ಭೂಮಿ ಜಲಾವೃತವಾಗಿದ್ದು, 696 ಪ್ರಾಣಿಗಳು ಕೊಚ್ಚಿಹೋಗಿವೆ. 52 ಪರಿಹಾರ ಶಿಬಿರಗಳಲ್ಲಿ 10,272 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಇನ್ನೂ 103 ಪರಿಹಾರ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ನಾಲ್ಕು ಜಿಲ್ಲೆಗಳಿಂದ 41,000ಕ್ಕೂ ಹೆಚ್ಚು ಜನರ ಮೇಲೆ ಪ್ರವಾಹ ಪರಿಣಾಮ ಉಂಟು ಮಾಡಿದ್ದು, ನಾಲ್ಕು ಜಿಲ್ಲೆಗಳಲ್ಲಿ ಭೂಕುಸಿತ ವರದಿಯಾಗಿದೆ.
ದಿಬ್ರುಗಢ ಮತ್ತು ನೀಮತಿಘಾಟ್‌ನಲ್ಲಿರುವ ಬ್ರಹ್ಮಪುತ್ರ, ನುಮಾಲಿಗಢದಲ್ಲಿರುವ ಧನ್ಸಿರಿ, ಕಂಪೂರಿನ ಕೊಪಿಲಿ, ಮತಿಜುರಿಯ ಕಟಖಾಲ್, ಬದರ್ಪುರ್ ಘಾಟ್‌ನಲ್ಲಿರುವ ಬರಾಕ್ ಮತ್ತು ಶ್ರೀಭೂಮಿಯ ಕುಶಿಯಾರ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ.