image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಮಾನ ನಷ್ಟದ ಬಗ್ಗೆ ಸತ್ಯ ಬಹಿರಂಗಪಡಿಸುವಂತೆ ಕೇಂದ್ರಕ್ಕೆ ಕಾಂಗ್ರೆಸ್ ಆಗ್ರಹ

ವಿಮಾನ ನಷ್ಟದ ಬಗ್ಗೆ ಸತ್ಯ ಬಹಿರಂಗಪಡಿಸುವಂತೆ ಕೇಂದ್ರಕ್ಕೆ ಕಾಂಗ್ರೆಸ್ ಆಗ್ರಹ

ನವದೆಹಲಿ: ಶನಿವಾರ ಸಿಂಗಾಪುರದಲ್ಲಿ ನಡೆದ ಸಂದರ್ಶನವೊಂದರಲ್ಲಿ ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಅನಿಲ್ ಚೌಹಾಣ್ ಪಾಕಿಸ್ತಾನದ ದಾಳಿಯಿಂದ ಭಾರತದ ಯುದ್ಧ ವಿಮಾನಗಳ ನಷ್ಟವಾಗಿರುವುದು ನಿಜ ಎಂದು ಒಪ್ಪಿಕೊಂಡ ನಂತರ, ಎನ್‌ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಸಿಡಿಎಸ್ ಅವರನ್ನು ರಾಷ್ಟ್ರವಿರೋಧಿ ಎಂದು ಬಿಜೆಪಿ ಪಕ್ಷ ಬ್ರ್ಯಾಂಡ್​ ಮಾಡುವುದಿಲ್ಲ ಎಂದು ಕಾಂಗ್ರೆಸ್​ ವ್ಯಂಗ್ಯವಾಡಿದೆ.

ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ, ಸಿಡಿಎಸ್ ಈಗಾಗಲೇ ಹೇಳಿದ್ದಕ್ಕೆ ಹೆಚ್ಚಿನದನ್ನು ಸೇರಿಸಲು ಬಯಸುವುದಿಲ್ಲ. ಈಗ ಸಿಡಿಎಸ್ ಅವರೇ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮ ಸಂವಾದದ ಸಮಯದಲ್ಲಿ ಹೆಚ್ಚಿನ ಹೇಳಿಕೆಗಳನ್ನು ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ಹಿಂದೆ ಪ್ರಶ್ನೆಗಳನ್ನು ಕೇಳಿದವರಿಗೆ ಇನ್ಮುಂದೆ ರಾಷ್ಟ್ರವಿರೋಧಿಗಳೆಂಬ ಹಣೆಪಟ್ಟಿ ಕಟ್ಟಬಾರದು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್​ ಪೋಸ್ಟ್​ ಮಾಡಿ, ನರೇಂದ್ರ ಮೋದಿ ಸರ್ಕಾರವು ರಾಷ್ಟ್ರವನ್ನು ದಾರಿ ತಪ್ಪಿಸಿದೆ. ಸ್ವತಂತ್ರ ತಜ್ಞರ ಸಮಿತಿಯಿಂದ ಭಾರತದ ರಕ್ಷಣಾ ಸನ್ನದ್ಧತೆಯ ಸಮಗ್ರ ವಿಮರ್ಶೆಯನ್ನು ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತದೆ. ಸಿಂಗಾಪುರದಲ್ಲಿ ನಡೆದ ಸಂದರ್ಶನವೊಂದರಲ್ಲಿ ಸಿಡಿಎಸ್ ನೀಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ, ಕೇಳಬೇಕಾದ ಕೆಲವು ಪ್ರಮುಖ ಪ್ರಶ್ನೆಗಳಿವೆ ಎಂದಿದ್ದಾರೆ.

ಸಂಸತ್ತಿನ ವಿಶೇಷ ಅಧಿವೇಶನವನ್ನು ತಕ್ಷಣವೇ ಕರೆದರೆ ಮಾತ್ರ ಆ ಪ್ರಶ್ನೆಗಳನ್ನು ಕೇಳಬಹುದು. ಮೋದಿ ಸರ್ಕಾರ ರಾಷ್ಟ್ರವನ್ನು ದಾರಿ ತಪ್ಪಿಸಿದೆ. ಯುದ್ಧದ ಮಂಜು ಈಗ ಕಡಿಮೆಯಾಗುತ್ತಿದೆ. ನಮ್ಮ ಐಎಎಫ್​ ಪೈಲಟ್‌ಗಳು ಶತ್ರುಗಳ ವಿರುದ್ಧ ಹೋರಾಡುತ್ತಾ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು. ನಾವು ಕೆಲವು ನಷ್ಟಗಳನ್ನು ಅನುಭವಿಸಿದ್ದೇವೆ. ಆದರೆ ನಮ್ಮ ಪೈಲಟ್‌ಗಳು ಸುರಕ್ಷಿತವಾಗಿದ್ದರು. ಸಿಡಿಎಸ್​​ ಅವರ ಸಂದರ್ಶನದ ಪ್ರಕಾರ, ನಾವು ಸಮಸ್ಯೆ ಸರಿಪಡಿಸಿದ್ದೇವೆ ಮತ್ತು ಎರಡು ದಿನಗಳ ನಂತರ ಅದನ್ನು ಮತ್ತೆ ಕಾರ್ಯಗತಗೊಳಿಸಿದ್ದೇವೆ. ನಮ್ಮ ಎಲ್ಲಾ ಜೆಟ್‌ಗಳನ್ನು ಮತ್ತೆ ಹಾರಿಸಿದ್ದೇವೆ ಎಂದ ಅವರು, ಧೈರ್ಯ ಮತ್ತು ಶೌರ್ಯಕ್ಕೆ ನಾವು ವಂದಿಸುತ್ತೇವೆ. ಆದಾಗ್ಯೂ, ಸಮಗ್ರ ಕಾರ್ಯತಂತ್ರದ ವಿಮರ್ಶೆಯು ಈ ಸಮಯದಲ್ಲಿ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ಕಾರ್ಗಿಲ್ ಪರಿಶೀಲನಾ ಸಮಿತಿಯ ಮಾದರಿಯಲ್ಲಿ ಸ್ವತಂತ್ರ ತಜ್ಞರ ಸಮಿತಿಯಿಂದ ನಮ್ಮ ರಕ್ಷಣಾ ಸನ್ನದ್ಧತೆಯ ಸಮಗ್ರ ವಿಮರ್ಶೆಯನ್ನು ಮಾಡಬೇಕೆಂದು ಒತ್ತಾಯಿಸುತ್ತದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಕದನ ವಿರಾಮದಲ್ಲಿ ಮಧ್ಯಸ್ಥಿಕೆ ವಹಿಸಿರುವ ಬಗ್ಗೆ ಪುನರುಚ್ಚರಿಸಿದ್ದಾರೆ. ಇದು ಶಿಮ್ಲಾ ಒಪ್ಪಂದಕ್ಕೆ ನೇರ ಅವಮಾನವಾಗಿದೆ ಎಂದಿದ್ದಾರೆ.

ಟ್ರಂಪ್ ಅವರ ಹೇಳಿಕೆ ಮತ್ತು ಅಮೆರಿಕದ ಕೋರ್ಟ್ ಆಫ್ ಇಂಟರ್ನ್ಯಾಷನಲ್ ಟ್ರೇಡ್‌ನಲ್ಲಿ ಸಲ್ಲಿಸಿದ ಅಫಿಡವಿಟ್ ಬಗ್ಗೆ ಪ್ರಧಾನಿ ಮೋದಿ ಸ್ಪಷ್ಟನೆ ನೀಡುವ ಬದಲು ಚುನಾವಣೆ ತಯಾರಿಯಲ್ಲಿದ್ದಾರೆ. ಟ್ರಂಪ್ ಅವರ ಟ್ವೀಟ್ ನಂತರ ವಿದೇಶಾಂಗ ಕಾರ್ಯದರ್ಶಿ ಮೇ 10 ರಂದು ಘೋಷಿಸಿದ ಬಗ್ಗೆ ದಾರಿ ತಪ್ಪಿಸುತ್ತಿದ್ದಾರೆ. ಸೀಸ್​ಫೈರ್ ಒಪ್ಪಂದದ ಷರತ್ತುಗಳೇನು? 140 ಕೋಟಿ ಭಾರತೀಯರು ಇದನ್ನು ತಿಳಿದುಕೊಳ್ಳಲು ಅರ್ಹರು" ಎಂದು ಖರ್ಗೆ ಹೇಳಿದ್ದಾರೆ.

Category
ಕರಾವಳಿ ತರಂಗಿಣಿ