ಹೈದೆರಾಬಾದ್ : ವಿಶ್ವದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ 'ಮಿಸ್ ವರ್ಲ್ಡ್ 2025'ರ ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗಿದ್ದು, ಗ್ಲ್ಯಾಮರ್‌ನೊಂದಿಗೆ ಇಂದು ರಾತ್ರಿ ಕಾರ್ಯಕ್ರಮ ಪೂರ್ಣಗೊಳ್ಳಲಿದೆ. 72ನೇ ವಿಶ್ವ ಸುಂದರಿ ಕಿರೀಟವನ್ನು ಯಾರು ಮುಡಿಗೇರಿಸಿಕೊಳ್ಳುತ್ತಾರೆ ಎಂಬ ಕುತೂಹಲ ವಿಶ್ವಮಟ್ಟದಲ್ಲಿದೆ. ಬಾಲಿವುಡ್ ತಾರೆಯರು, ಅಂತಾರಾಷ್ಟ್ರೀಯ ಅತಿಥಿಗಳು ಮತ್ತು ಪ್ರಪಂಚದಾದ್ಯಂತದ ಪ್ರಮುಖ ಸ್ಪರ್ಧಿಗಳ ಬೆರಗುಗೊಳಿಸುವ ಪ್ರದರ್ಶನಗಳು ವೇದಿಕೆಯ ಮೆರುಗನ್ನು ಹೆಚ್ಚಿಸಲಿದೆ.
ಜಗತ್ತಿನಾದ್ಯಂತದ 108 ಸ್ಪರ್ಧಿಗಳು ಪ್ರತಿಷ್ಠಿತ ಸೌಂದರ್ಯ ಕಿರೀಟಕ್ಕಾಗಿ ಸ್ಪರ್ಧಿಸಿದರು. ಆ ಪೈಕಿ, ಮಿಸ್ ಇಂಡಿಯಾ ನಂದಿನಿ ಗುಪ್ತಾ ಅಗ್ರ 40 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದಿದ್ದು, ಭಾರತ 7ನೇ ಕಿರೀಟವನ್ನು ಗೆಲ್ಲುವ ಭರವಸೆಯನ್ನು ಹುಟ್ಟುಹಾಕಿದೆ. ಪ್ರಸ್ತುತ 40 ಸುಂದರಿಯರು ಸ್ಪರ್ಧೆಯಲ್ಲಿದ್ದು, ಇಂದು ಅಂತಿಮ ಪ್ರಶ್ನೋತ್ತರ ಸುತ್ತಿನ ಆಧಾರದ ಮೇಲೆ ಓರ್ವ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಹಾಲಿ ಮಿಸ್ ವರ್ಲ್ಡ್ ಕ್ರಿಸ್ಟಿನಾ ಪಿಜ್ಕೋವಾ ( Kristina Pizkova-2024) ಅವರು ಮುಂದಿನ ವಿಶ್ವಸುಂದರಿಗೆ ಕಿರೀಟ ಧಾರಣೆ ಮಾಡಲಿದ್ದಾರೆ.
ಗ್ರ್ಯಾಂಡ್ ಫಿನಾಲೆ ಅದ್ಭುತ ಪ್ರದರ್ಶನ ನೀಡುವ ಭರವಸೆಯಿದೆ. ಬಾಲಿವುಡ್ ತಾರೆಯರಾದ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಇಶಾನ್ ಖಟ್ಟರ್ ಅವರ ಪ್ರದರ್ಶನ ಇರಲಿದೆ. ಈ ಕಾರ್ಯಕ್ರಮವನ್ನು 2016ರ ಮಿಸ್ ವರ್ಲ್ಡ್ ಸ್ಟೆಫನಿ ಡೆಲ್ ವ್ಯಾಲೆ ಮತ್ತು ನಿರೂಪಕ ಸಚಿನ್ ಕುಂಭಾರ್ ನಿರೂಪಿಸಲಿದ್ದಾರೆ. 2017ರ ಮಿಸ್ ವರ್ಲ್ಡ್ (ಭಾರತ) ಮಾನುಷಿ ಚಿಲ್ಲರ್ ಕೂಡಾ ಈ ಸಮಾರಂಭದ ಗಣ್ಯರಲ್ಲಿ ಒಬ್ಬರು.
ಬಾಲಿವುಡ್ ನಟ ಮತ್ತು ಸಮಾಜಸೇವಕ ಸೋನು ಸೂದ್ ಅವರಿಗೆ ಮಾನವೀಯ ಪ್ರಶಸ್ತಿಯನ್ನು (Humanitarian Award) ನೀಡಲಾಗುವುದು. ಕೋವಿಡ್ ಮತ್ತು ನಂತರದ ದಿನಗಳಲ್ಲಿನ ಅವರ ಶ್ಲಾಘನೀಯ ಕಾರ್ಯಕ್ಕಾಗಿ ಅವರನ್ನು ಪ್ರತಿಷ್ಠಿತ ಕಾರ್ಯಕ್ರದಲ್ಲಿ ಗೌರವಿಸಲಾಗುವುದು.