ತಮಿಳುನಾಡು : ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಜ್ಞಾನಶೇಖರನ್ ದೋಷಿ ಎಂದು ಚೆನ್ನೈ ಮಹಿಳಾ ನ್ಯಾಯಾಲಯ ತೀರ್ಪು ನೀಡಿದೆ. ಜೂನ್ 2ಕ್ಕೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ಹೇಳಿದೆ. 2024 ರ ಡಿಸೆಂಬರ್ 23 ರಂದು ಅಣ್ಣಾ ವಿಶ್ವವಿದ್ಯಾಲಯದ ಆವರಣದಲ್ಲಿ 19 ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ರಾಜಲಕ್ಷ್ಮೀ ಅವರು ಜ್ಞಾನಶೇಖರನ್ ತಪ್ಪಿತಸ್ಥ ಎಂದು ಘೋಷಿಸಿದರು. ರಾಜಕೀಯವಾಗಿ ಭಾರೀ ಸದ್ದು ಮಾಡಿದ್ದ ಪ್ರಕರಣದಲ್ಲಿ, ಘಟನೆ ನಡೆದ 5 ತಿಂಗಳಲ್ಲಿ ತೀರ್ಪು ಹೊರಬಿದ್ದಿದೆ.
ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ ಪ್ರಕರಣವು ತಮಿಳುನಾಡಿನಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಸಂತ್ರಸ್ತ ವಿದ್ಯಾರ್ಥಿನಿ ಕೊಟ್ಟೂರುಪುರಂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮೊಬೈಲ್ ಸಿಗ್ನಲ್‌ಗಳ ಆಧಾರದ ಮೇಲೆ ತನಿಖೆ ನಡೆಸಿ, ಆರೋಪಿ ಜ್ಞಾನಶೇಖರನ್ ಅವರನ್ನು ಡಿಸೆಂಬರ್ 26 ರಂದು ಬಂಧಿಸಿದ್ದರು.
ಘಟನೆ ನಡೆದ ದಿನ ಅಣ್ಣಾ ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಿದ್ದು ಜ್ಞಾನಶೇಖರನ್ ಎಂಬುದು ತನಿಖೆಯಲ್ಲಿ ತಿಳಿದು ಬಂದಿತ್ತು. ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕೆಳಗೆ ಬಿದ್ದು ಕೈ ಕಾಲು ಮುರಿದುಕೊಂಡಿದ್ದ ಎಂದು ಪೊಲೀಸರು ಚಾರ್ಜ್ ಶೀಟ್ನಲ್ಲಿ ಆರೋಪಿಸಿದ್ದರು. ತಮಿಳುನಾಡು ಸರ್ಕಾರವು ಜ್ಞಾನಶೇಖರನ್ ವಿಚಾರಣೆ ನಡೆಸಲು 3 ಮಹಿಳಾ ಐಪಿಎಸ್ ಅಧಿಕಾರಿಗಳ ತಂಡವನ್ನು ರಚಿಸಿತ್ತು. ತನಿಖಾ ತಂಡವು ವಿಚಾರಣೆ ನಡೆಸಿ ಚೆನ್ನೈ ಮಹಿಳಾ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಲಯವು, 29 ಸಾಕ್ಷಿಗಳ ಹೇಳಿಕೆಗಳನ್ನು ಆಲಿಸಿತು. ಅಲ್ಲದೇ, ತನಿಖಾ ತಂಡವು, ಸಿಸಿಟಿವಿ ಸಾಕ್ಷ್ಯಗಳು ಮತ್ತು ಮೊಬೈಲ್ ಧ್ವನಿ ರೆಕಾರ್ಡಿಂಗ್ ಕ್ಲಿಪ್ ಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತು. ಇದೆಲ್ಲವನ್ನೂ ಪರಿಗಣಿಸಿದ ಕೋರ್ಟ್ ಜ್ಞಾನಶೇಖರನ್ ದೋಷಿ ಎಂದು ಘೋಷಿಸಿದೆ. ದೋಷಿ ಜ್ಞಾನಶೇಖರನ್ ಆಡಳಿತಾರೂಢ ಡಿಎಂಕೆ ಪಕ್ಷದ ಸದಸ್ಯ ಎಂಬುದು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿತ್ತು. ವಿಪಕ್ಷಗಳು ಡಿಎಂಕೆ ವಿರುದ್ಧ ಮುಗಿಬಿದ್ದಿದ್ದವು. ಆದರೆ, ಇದನ್ನು ನಿರಾಕರಿಸಿದ್ದ ಡಿಎಂಕೆ, ಆತ ಪಕ್ಷದ ಬೆಂಬಲಿಗನೇ ಹೊರತು ಸದಸ್ಯನಲ್ಲ ಎಂದು ಸ್ಪಷ್ಟನೆ ನೀಡಿತ್ತು. ಜ್ಞಾನಶೇಖರನ್ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ.