image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿದೇಶಿ ವಿದ್ಯಾರ್ಥಿಗಳಿಗೆ ವೀಸಾ ಅಮಾನತು ನಿರ್ಣಯವು ಈ ಮೊದಲೇ ಸಮಯ ನಿಗದಿಪಡಿಸಿಕೊಂಡವರಿಗೆ ಅನ್ವಯವಾಗುವುದಿಲ್ಲ

ವಿದೇಶಿ ವಿದ್ಯಾರ್ಥಿಗಳಿಗೆ ವೀಸಾ ಅಮಾನತು ನಿರ್ಣಯವು ಈ ಮೊದಲೇ ಸಮಯ ನಿಗದಿಪಡಿಸಿಕೊಂಡವರಿಗೆ ಅನ್ವಯವಾಗುವುದಿಲ್ಲ

ವಾಷಿಂಗ್ಟನ್​: ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಲು ಮುಂದಾಗುವ ವಿದೇಶಿ ವಿದ್ಯಾರ್ಥಿಗಳಿಗೆ ಹೊಸ ವೀಸಾ ಸಂದರ್ಶನಗಳನ್ನು ವಿದೇಶಾಂಗ ಇಲಾಖೆ ಸ್ಥಗಿತಗೊಳಿಸಿದೆ. ಆದರೆ, ಸಾಮಾಜಿಕ ಮಾಧ್ಯಮದ ಸ್ಕ್ರೀನಿಂಗ್ ಮಾಡಲು ಮುಂದಾಗಿರುವ ಹಿನ್ನಲೆ ಈ ಕ್ರಮ ವಿಸ್ತರಿಸಲು ಸಿದ್ಧತೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶಿ ವಿದ್ಯಾರ್ಥಿಗಳ ಈ ವೀಸಾ ರದ್ದತಿ ಅಮಾನತು ತಾತ್ಕಾಲಿಕವಾಗಿದ್ದು, ಈಗಾಗಲೇ ವೀಸಾ ಸಂದರ್ಶನಕ್ಕೆ ಸಮಯ ನಿಗದಿಪಡಿಸಿಕೊಂಡಿರುವ ಅರ್ಜಿದಾರರಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

ವೀಸಾ ಸ್ಕ್ರೀನಿಂಗ್​ ಕುರಿತು ಸಾಮಾಜಿಕ ಮಾಧ್ಯಮ ಪರಿಶೀಲನೆಯ ಕುರಿತು ಮಾರ್ಗದರ್ಶನ ನೀಡಲು ವಿದೇಶಾಂಗ ಇಲಾಖೆ ಯೋಜಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಸಹಿ ಮಾಡಿದ ಪ್ರತಿ ಆಧಾರದ ಮೇಲೆ ಅಸೋಸಿಯೇಟ್​ ಪ್ರೆಸ್​ ವರದಿ ಮಾಡಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ, ಅಗತ್ಯ ಇರುವ ಸಾಮಾಜಿಕ ಮಾಧ್ಯಮ ತಪಾಸಣೆ ಮತ್ತು ಪರಿಶೀಲನೆ ವಿಸ್ತರಣೆಗೆ ಸಿದ್ಧತೆ ಮಾಡುವಂತೆ ತಿಳಿಸಲಾಗಿದೆ. ಹಾಗೇ ಮುಂದಿನ ಮಾರ್ಗದರ್ಶನದವರೆಗೆ ಕಾನ್ಸುಲೇಟ್ ವಿಭಾಗಗಳು ಯಾವುದೇ ಹೆಚ್ಚುವರಿ ವಿದ್ಯಾರ್ಥಿ ಅಥವಾ ವಿನಿಮಯ ಸಂದರ್ಶಕರ ವೀಸಾ ನೇಮಕಾತಿ ನಡೆಸಬಾರದು ಎಂದು ತಿಳಿಸಲಾಗಿದೆ.

ವಿದ್ಯಾರ್ಥಿಗಳ ವೀಸಾ ಅಮಾನತು ಕುರಿತು ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಇಲಾಖೆಯ ವಕ್ತಾರ ಟ್ಯಾಮಿ ಬ್ರೂಸ್, ವೀಸಾಗಳಿಗೆ ಅರ್ಜಿ ಸಲ್ಲಿಕೆ ಅಭ್ಯರ್ಥಿಗಳ ಪರಿಶೀಲನೆಗೆ ಅಮೆರಿಕ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಕೆ ಮಾಡಲಾಗುತ್ತಿದೆ. ವಿದ್ಯಾರ್ಥಿ ಅಥವಾ ಯಾರೇ ಬರಲಿ ಅವರ ಬಗ್ಗೆ ಪೂರ್ವ ಪರಿಶೀಲನೆ ನಡೆಸಲು ಎಲ್ಲಾ ವಿಧಾನವನ್ನು ಬಳಕೆ ಮಾಡುವುದನ್ನು ಮುಂದುವರೆಸಲಾಗಿದೆ ಎಂದರು. 

ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮೇಲೆ ಟ್ರಂಪ್​ ಆಡಳಿತ ಕಠಿಣ ಕ್ರಮ ಕೈಗೊಂಡಿರುವ ಕುರಿತು ಪೊಲಿಟಿಕೊ ವರದಿ ಮಾಡಿತ್ತು. ಹಾರ್ವರ್ಡ್ ವಿಶ್ವವಿದ್ಯಾಲಯವು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ದಾಖಲೆ ರದ್ದುಗೊಳಿಸಿ, ಅಮೆರಿಕದಲ್ಲಿ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳ ವೀಸಾ ಪ್ರಕ್ರಿಯೆ ರದ್ದುಗೊಳಿಸುವಂತೆ ಸೂಚಿಸಲಾಗಿತ್ತು. ಟ್ರಂಪ್​ ಆಡಳಿತದ ಈ ಪ್ರಯತ್ನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಇದೀಗ ಫೆಡರಲ್​ ನ್ಯಾಯಾಧೀಶರು ಅದನ್ನು ನಿರ್ಬಂಧಿಸಿದ್ದಾರೆ

ಈಗಾಗಲೇ ದೇಶದಲ್ಲಿನ ಸಾವಿರಾರು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಕಾನೂನು ಸ್ಥಾನಮಾನವನ್ನು ರದ್ದುಗೊಳಿಸಲಾಗಿದ್ದು, ಇದರಿಂದ ಅವರು ಗಡಿಪಾರು ಭಯದಿಂದ ಅಮೆರಿಕ ತೊರೆಯುವಂತೆ ಆಗಿದೆ. ಅನೇಕ ವಿದ್ಯಾರ್ಥಿಗಳು ಕಾನೂನು ಹೋರಾಟದಲ್ಲಿ ಜಯಗಳಿಸಿರುವ ಪರಿಣಾಮ ತಮ್ಮ ವಿದ್ಯಾರ್ಥಿ ಸ್ಥಾನಮಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸರ್ಕಾರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಕಾನೂನು ಸ್ಥಾನಮಾನವನ್ನು ಕೊನೆಗೊಳಿಸುವ ಕ್ರಮಗಳನ್ನು ವಿಸ್ತರಿಸಿದೆ.

Category
ಕರಾವಳಿ ತರಂಗಿಣಿ