ಫ್ರಾನ್ಸ್: ಜೀವನ ಅಂತ್ಯ ಮಾಡಿಕೊಳ್ಳುವುದಕ್ಕಾಗಿ ಕಾನೂನುಬದ್ಧ ಆಯ್ಕೆ ಕಲ್ಪಿಸುವಂತೆ ಯುರೋಪಿನಾದ್ಯಂತ ಸಾರ್ವಜನಿಕ ಬೇಡಿಕೆಗಳು ಹೆಚ್ಚುತ್ತಿವೆ. ಗುಣಪಡಿಸಲಾಗದ ಅನಾರೋಗ್ಯದಿಂದ ಬಳಲುತ್ತಿರುವ ವಯಸ್ಕರು ಮಾರಕ ಔಷಧಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುವಂತೆ ಒತ್ತಾಯಿಸುತ್ತಲೇ ಇದ್ದಾರೆ. ಹೆಚ್ಚೆಚ್ಚು ಒತ್ತಾಯ ಕೇಳಿ ಬರುತ್ತಿರುವ ಹೊತ್ತಲ್ಲೇ ಇಂತಹದೊಂದು ದಯಾಮರಣದ ವಿಧೇಯಕಕ್ಕೆ ಫ್ರಾನ್ಸ್‌ನ ಕೆಳಮನೆ ಅಂಗೀಕಾರ ನೀಡಿದೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ದೀರ್ಘ-ಚರ್ಚೆ ನಡೆದು ಮತಕ್ಕೆ ಹಾಕಲಾಯಿತು. ಈ ಮೂಲಕ ಪ್ರಮುಖ ವಿಚಾರವಾಗಿ ಮಂಡಿಸಲಾಗದ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿದೆ. ಆದಾಗ್ಯೂ ಮಸೂದೆ ಕಾನೂನಾಗುವ ಮೊದಲು ಇತರ ಪ್ರಕ್ರಿಯೆಗಳು ಬಾಕಿ ಉಳಿದಿವೆ.
ಒಂದು ದಶಕಕ್ಕೂ ಹೆಚ್ಚು ಕಾಲ ನಾನು ಭೇಟಿಯಾದ ಎಲ್ಲಾ ರೋಗಿಗಳು ಮತ್ತು ಅವರ ಪ್ರೀತಿಪಾತ್ರರ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಅನೇಕರು ಈಗ ಇಲ್ಲಿಲ್ಲ, ಮತ್ತು ಅವರು ಯಾವಾಗಲೂ ನನಗೆ ಹೋರಾಡುತ್ತಲೇ ಇರಿ ಎಂದು ಹೇಳುತ್ತಿದ್ದರು ಎಂದು ಒಲಿವಿಯರ್ ಫಾಲೋರ್ನಿ ಹೇಳಿದ್ದಾರೆ. ವಿಧೇಯಕದ ಪರ ಮಾತನಾಡಿದ ಇವರಿಗೆ ಸಹ ಸಂಸದರ ಚಪ್ಪಾಳೆಗಳ ಸುರಿಮಳೆಯಾಯಿತು. ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾರಕ ಔಷಧಗಳನ್ನ ತೆಗೆದುಕೊಳ್ಳಲು ಅನುಮತಿ ನೀಡುವ ಪ್ರಸ್ತಾವಿತ ಕ್ರಮವು, ಜೀವನ ಅಂತ್ಯಗೊಳಿಸಿಕೊಳ್ಳಲು ನೆರವು ಅಥವಾ ಅವಕಾಶ ಕಲ್ಪಿಸಿಕೊಡಲಿದೆ. ಯಾರಿಗೆ ಔಷಧವನ್ನೂ ತೆಗೆದುಕೊಳ್ಳಲು ಸಾಧ್ಯವಿಲ್ಲವೋ ಅಂತಹವರು ಮಾತ್ರ ವೈದ್ಯರು ಅಥವಾ ನರ್ಸ್‌ಗಳ ಸಹಾಯ ಪಡೆಯಲು ಈ ಕಾನೂನು ಅವಕಾಶ ಕಲ್ಪಿಸಿ ಕೊಡಲಿದೆ.
ವಿಧೇಯಕದ ಪರವಾಗಿ 305 ಮತಗಳು ಮತ್ತು ವಿರುದ್ಧವಾಗಿ 199 ಮತಗಳು ಬಂದಿದ್ದು, ಇದನ್ನು ಸೆನೆಟ್‌ಗೆ ಕಳುಹಿಸಲಾಗುತ್ತದೆ. ಅಲ್ಲಿ ಸಂಪ್ರದಾಯವಾದಿಗಳು ವಿಧೇಯಕದಲ್ಲಿ ಕೆಲ ಬದಲಾವಣೆ ಅಥವಾ ತಿದ್ದುಪಡಿ ಮಾಡಲು ಪ್ರಯತ್ನಿಸಬಹುದು. ಫ್ರಾನ್ಸ್‌ನ ದೀರ್ಘ ಮತ್ತು ಸಂಕೀರ್ಣ ಪ್ರಕ್ರಿಯೆಯ ಮಧ್ಯೆ ಈ ಕ್ರಮದ ಕುರಿತು ನಿರ್ಣಾಯಕ ನಿರ್ಧಾರ ಅಥವಾ ಅಂಗೀಕಾರ ಪಡೆದುಕೊಳ್ಳಲು ಕೆಲವು ತಿಂಗಳುಗಳ ಕಾಲ ತೆಗೆದುಕೊಳ್ಳಬಹುದು. ವಾಸಿಯಾಗದ ಹಾಗೂ ತೀವ್ರ ಯಾತನೆಯ ಕಾಯಿಲೆಗಳಿಂದ ಬಳಲುತ್ತಿರುವ ಹಾಗೂ ಜೀವನವನ್ನ ಕೊನೆಗೊಳಿಸಿಕೊಳ್ಳಬೇಕು ಎಂದು ಕಾಯುತ್ತಿರುವವರಿಗೆ ಇದು ಯಾತನೆ ವಿಷಯವಾಗಿದೆ. ಕಾನೂನು ರೂಪಿಸಲು ಅಥವಾ ಅನುಮತಿಗಾಗಿ ಸಂಸದೀಯ ಪ್ರಕ್ರಿಯೆಯ ಸಂಕೀರ್ಣತೆಯಿಂದ ಕೂಡಿದೆ ಎಂದು ಇದರ ಪರವಾಗಿ ಹೋರಾಡುತ್ತಿರುವ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕಾನೂನಿನ ಪ್ರಯೋಜನ ಪಡೆಯಲು ರೋಗಿಗಳು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಫ್ರೆಂಚ್ ನಾಗರಿಕರಾಗಿರಬೇಕು ಅಥವಾ ಫ್ರಾನ್ಸ್‌ನಲ್ಲಿ ವಾಸಿಸಬೇಕು. ರೋಗಿಗೆ "ಮುಂದುವರಿದ ಅಥವಾ ಕೊನೆಯ ಹಂತದಲ್ಲಿ" ಗಂಭೀರ ಮತ್ತು ಗುಣಪಡಿಸಲಾಗದ ಕಾಯಿಲೆ ಇದೆ ಎಂದು ಖಚಿತವಾಗಿರಬೇಕು. ಅಸಹನೀಯ ಮತ್ತು ಚಿಕಿತ್ಸೆ ನೀಡಲಾಗದ ನೋವಿನಿಂದ ಬಳಲುತ್ತಿದ್ದಾರೆ ಎಂಬುದು ಸಂಬಂಧಪಟ್ಟ ಪರಿಣತರಿಂದ ದೃಢೀಕರಿಸಲ್ಪಟ್ಟಿರಬೇಕು. ಮತ್ತು ಅವರ ಸ್ವಂತ ಇಚ್ಛೆಯಿಂದಲೇ ಅವರು ಮಾರಕ ಔಷಧಿಗಳನ್ನು ಪಡೆಯುತ್ತಿದ್ದಾರೆ ಎಂದು ವೈದ್ಯಕೀಯ ವೃತ್ತಿಪರರ ತಂಡವು ದೃಢೀಕರಿಸಬೇಕಾಗುತ್ತದೆ.