ಛತ್ತೀಸ್‌ಗಢ : ಪ್ರಮುಖ ನಕ್ಸಲ್ ನಾಯಕ ಬಸವರಾಜು ಸೇರಿದಂತೆ 27 ಮಾವೋವಾದಿಗಳನ್ನು ಭದ್ರತಾ ಪಡೆಗಳು ಎನ್ಕೌಂಟರ್ ಮಾಡಿದ ಬಳಿಕ ನಕ್ಸಲ್ವಾದದ ಜಂಘಾಬಲವೇ ಹುದುಗಿ ಹೋಗಿದೆ. ಭದ್ರತಾ ಪಡೆಗಳ ಕಾರ್ಯಾಚರಣೆಗೆ ಬೆದರಿರುವ 18 ನಕ್ಸಲರು ಇಂದು ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಮುಂದೆ 18 ನಕ್ಸಲರು ಮಂಡಿಯೂರಿದ್ದಾರೆ. ಅವರಲ್ಲಿ 10 ಮಂದಿ ತಲೆಗೆ 38 ಲಕ್ಷ ರೂಪಾಯಿ ಬಹುಮಾನ ಘೋಷಿತರಾದ ಪ್ರಮುಖ ನಕ್ಸಲರೂ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೊಳ್ಳು, ಅಮಾನವೀಯ ಮಾವೋವಾದಿ ಸಿದ್ಧಾಂತ ಮತ್ತು ಸ್ಥಳೀಯ ಬುಡಕಟ್ಟು ಜನಾಂಗದವರ ಮೇಲೆ ನಕ್ಸಲರು ನಡೆಸಿದ ದೌರ್ಜನ್ಯಗಳಿಂದ ನೊಂದಿರುವ ನಕ್ಸಲರು ಇಂದು ಹಿರಿಯ ಪೊಲೀಸ್ ಮತ್ತು ಸಿಆರ್‌ಪಿಎಫ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ಅವರು ಮಾಹಿತಿ ನೀಡಿದ್ದಾರೆ.
ಕಾಡೊಳಗಿನ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಜಾರಿ ಮಾಡಿರುವ 'ನಿಯದ್ ನೆಲ್ಲನಾರ್' (ನಿಮ್ಮ ಒಳ್ಳೆಯ ಗ್ರಾಮ) ಯೋಜನೆ ಮತ್ತು ಶರಣಾಗತಿ ಮತ್ತು ಪುನರ್ವಸತಿ ನೀತಿಗೆ ಪ್ರಭಾವಿತರಾಗಿದ್ದಾರೆ. ಹೀಗಾಗಿ, ಅವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಶರಣಾದ ನಕ್ಸಲರಲ್ಲಿ ಮಾವೋವಾದಿಗಳ ಪಿಎಲ್‌ಜಿಎ ಬೆಟಾಲಿಯನ್ ಸಂಖ್ಯೆ 1ರ ಪ್ಲಟೂನ್ ಪಾರ್ಟಿ ಕಮಿಟಿ ಸದಸ್ಯ ಮಡ್ಕಮ್ ಆಯ್ತಾ (25), ಅದೇ ಬೆಟಾಲಿಯನ್‌ನ ಸದಸ್ಯ ಭಾಸ್ಕರ್ ಅಲಿಯಾಸ್ ಭೋಗಮ್ ಲಖಾ (26) ಎಂಬಿಬ್ಬರ ತಲೆಗೆ 8 ಲಕ್ಷ ರೂಪಾಯಿ ಘೋಷಣೆಯಾಗಿತ್ತು. ಮಾವೋವಾದಿಗಳ ಪ್ರದೇಶ ಸಮಿತಿ ಸದಸ್ಯ ಮಡ್ಕಮ್ ಕಮ್ಲು (25) ಮತ್ತು ಲಕ್ಷ್ಮಣ್ ಅಲಿಯಾಸ್ ಮದ್ವಿ ಛನ್ನು (28) ತಲೆಗೆ 5 ಲಕ್ಷ, ಇತರ ಆರು ಜನರಿಗೆ ತಲಾ 2 ಲಕ್ಷ ರೂಪಾಯಿ ಘೋಷಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.