ತಮಿಳುನಾಡು: ಮಕ್ಕಳ್ ನೀಧಿ ಮಯ್ಯಮ್ (MNM) ಪಕ್ಷದ ಮುಖ್ಯಸ್ಥ ಹಾಗೂ ಬಹುಭಾಷಾ ನಟ ಕಮಲ್ ಹಾಸನ್ ಅವರನ್ನು ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ರಾಜ್ಯಸಭೆಗೆ ಕಳುಹಿಸಲು ಮುಂದಾಗಿದೆ. ಈ ಕುರಿತು ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ. ತಮಿಳುನಾಡಿನ 6 ರಾಜ್ಯಸಭಾ ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ಕಮಲ್ ಹಾಸನ್ ಅವರನ್ನು ಡಿಎಂಕೆ ಕಣಕ್ಕಿಳಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. 6 ಸ್ಥಾನಗಳ ಪೈಕಿ ಡಿಎಂಕೆ ಮೈತ್ರಿಕೂಟದಿಂದ 4 ಅಭ್ಯರ್ಥಿಗಳು ಮತ್ತು ಎಐಎಡಿಎಂಕೆ ಮೈತ್ರಿಕೂಟದಿಂದ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಓರ್ವ ಸದಸ್ಯನ ಗೆಲುವಿಗೆ 34 ಶಾಸಕರ ಬೆಂಬಲದ ಅಗತ್ಯವಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದ ಮಕ್ಕಳ್ ನೀಧಿ ಮಯ್ಯಮ್ ಪಕ್ಷದ ಕಮಲ್ ಹಾಸನ್, ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕಾಗಿ ಭಾರೀ ಪ್ರಚಾರ ಮಾಡಿದ್ದರು. ಈ ಮೈತ್ರಿಕೂಟ ತಮಿಳುನಾಡಿನ ಎಲ್ಲಾ 39 ಸ್ಥಾನಗಳು ಮತ್ತು ಪುದುಚೇರಿಯ ಒಂದು ಸ್ಥಾನ ಗೆದ್ದುಕೊಂಡಿತ್ತು. ತನ್ನ ಶಾಸಕ ಬಲದ ಆಧಾರದ ಮೇಲೆ ಆರು ರಾಜ್ಯಸಭಾ ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿರುವ ಡಿಎಂಕೆ (DMK) ಒಪ್ಪಂದದಂತೆ ಕಮಲ್ ಹಾಸನ್ ಅವರನ್ನು ಶೀಘ್ರದಲ್ಲೇ ರಾಜ್ಯಸಭೆಗೆ ನಾಮನಿರ್ದೇಶನ ಮಾಡಬಹುದು ಎನ್ನಲಾಗುತ್ತಿದೆ.
ಎಐಎಡಿಎಂಕೆಯಿಂದ ಒಬ್ಬ ರಾಜ್ಯಸಭಾ ಸದಸ್ಯ ಮಾತ್ರ ಯಾರ ಬೆಂಬಲವಿಲ್ಲದೆ ಗೆಲ್ಲಬಹುದು. ಮತ್ತೊಬ್ಬರು ಸ್ಪರ್ಧಿಸಲು ಬಯಸಿದರೆ ಬಿಜೆಪಿ, ಪಿಎಂಕೆ ಪಕ್ಷಗಳ ಶಾಸಕರ ಬೆಂಬಲ ಬೇಕಾಗುತ್ತದೆ. ಆಗ ಮಾತ್ರ 2ನೇ ಸ್ಥಾನದಲ್ಲಿ ಎಐಎಡಿಎಂಕೆಯಿಂದ ಸ್ಪರ್ಧಿಸುವ ಅಭ್ಯರ್ಥಿ ಗೆಲ್ಲಬಹುದು. ಒಟ್ಟಾರೆ, ಆರೂ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯುವ ನಿರೀಕ್ಷೆ ಇದೆ. ಕೇಂದ್ರ ಚುನಾವಣಾ ಆಯೋಗವು ಅಸ್ಸಾಂ ಹಾಗೂ ತಮಿಳುನಾಡಿನ ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಪಡಿಸಿದೆ. ಜೂನ್ 14 ಹಾಗೂ 24ರಂದು ಕ್ರಮವಾಗಿ ಅಸ್ಸಾಂ ಮತ್ತು ತಮಿಳುನಾಡು ರಾಜ್ಯಗಳ ರಾಜ್ಯಸಭಾ ಸ್ಥಾನಗಳು ಖಾಲಿಯಾಗಲಿದ್ದು, ತಮಿಳುನಾಡಿನ 6 ಮತ್ತು ಅಸ್ಸಾಂನ 2 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಿದೆ.