ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಉಲ್ಬಣಗೊಳ್ಳುತ್ತಿವೆ. ಆದರೆ, ಈ ಹೊಸ ಕೋವಿಡ್ ತಳಿ ಬಗ್ಗೆ ಆತಂಕ ಬೇಡ. ಕೋವಿಡ್19 ಜೆಎನ್1 ರೂಪಾಂತರದ ಬಗ್ಗೆ ಆತಂಕಕ್ಕೆ ಒಳಗಾಗುವ ಯಾವುದೇ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಐಸಿಎಐಆರ್ ರೋಗ ನಿರ್ಮೂಲನಾ ವಿಭಾಗದ ಅಧ್ಯಕ್ಷ ಡಾ ರಜನಿ ಕಾಂತ್ ಶ್ರೀವಾಸ್ತವ, ಕೋವಿಡ್ 19 ಸೋಂಕು ಸಂಪೂರ್ಣವಾಗಿ ಹೋಗುವುದಿಲ್ಲ. ಅದು ರೂಪಾಂತರಗೊಳ್ಳುತ್ತಿರುತ್ತದೆ ಎಂದು ತಿಳಿಸಿದ್ದಾರೆ.
ಈ ಸೋಂಕು ಭಾರತಕ್ಕೆ ಆತಂಕಕಾರಿ ವಿಚಾರವಲ್ಲ. ನಮ್ಮ ದೇಶದಲ್ಲಿ ಬಹುತೇಕ ಜನರು ಈಗಾಗಲೇ ಲಸಿಕೆ ಪಡೆದಿದ್ದು, ಸೋಂಕಿಗೆ ಒಡ್ಡಿಕೊಂಡಿರುವುದರಿಂದ ಭಯಪಡುವ ಅವಶ್ಯಕತೆ ಇಲ್ಲ. ಆದರೆ, ಪರಿಸ್ಥಿತಿಯ ಬಗ್ಗೆ ಜಾಗೃತರಾಗಿರಬೇಕು. ಯಾರಿಗಾದರೂ ಕೆಮ್ಮು ಮತ್ತು ಜ್ವರದ ಲಕ್ಷಣಗಳು ಕಂಡು ಬಂದರೆ, ಅವರು ವೈದ್ಯರನ್ನು ಸಂಪರ್ಕಿಸಬೇಕು. ಸಿಂಗಾಪುರ ಮತ್ತು ಹಾಂಕಾಂಗ್‌ನಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ, ಗೋವಾ, ಉತ್ತರಾಖಂಡ, ಒಡಿಶಾ, ಉತ್ತರ ಪ್ರದೇಶ, ಕರ್ನಾಟಕ, ಹರಿಯಾಣ, ದೆಹಲಿ ಮತ್ತು ಮಧ್ಯಪ್ರದೇಶ ಸೇರಿದಂತೆ ಭಾರತದ ಕೆಲವು ರಾಜ್ಯಗಳು ಸಹ ಕೋವಿಡ್ -19 ಪ್ರಕರಣಗಳು ವರದಿ ಆಗಿವೆ ಎಂದರು.
ಸದ್ಯದ ಸೋಂಕು ರೂಪಾಂತರ ಜೆಎನ್1 ಓಮಿಕ್ರಾನ್‌ನ ಉಪ - ರೂಪಾಂತರವಾಗಿದೆ. ವೈರಸ್‌ಗಳು ರೂಪಾಂತರಗೊಳ್ಳುತ್ತಲೇ ಇರುವುದರಿಂದ, ರೂಪಾಂತರಗಳು ಹುಟ್ಟುತ್ತವೆ. ಕೋವಿಡ್ 19 ಚೀನಾದಿಂದ ಮೊದಲು ಕಾಣಿಸಿಕೊಂಡಾಗ ಅದಕ್ಕೆ ಯಾವುದೇ ಚಿಕಿತ್ಸೆ ಮತ್ತು ರೋಗ ನಿರ್ಣಯ ಇರಲಿಲ್ಲ. ವೈರಸ್ ಎದುರಿಸಲು ಲಸಿಕೆ ಮತ್ತು ರೋಗನಿರೋಧಕ ಶಕ್ತಿ ಇರಲಿಲ್ಲ. ಆದರೆ, ಇದೀಗ ಭಾರತದಲ್ಲಿ ಜನರು ವೈರಸ್‌ಗೆ ಒಡ್ಡಿಕೊಂಡಿದ್ದು, ಲಸಿಕೆ ಪಡೆದಿದ್ದು, ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದರು.