ಪಾಕಿಸ್ತಾನ: ಭಾರತದೊಂದಿಗೆ ಶಾಂತಿ ಮಾತುಕತೆಗೆ ಎದುರು ನೋಡುತ್ತಿರುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ. ನಾಲ್ಕು ದೇಶಗಳ ಪ್ರವಾಸದ ವೇಳೆ ಮಾತನಾಡಿರುವ ಅವರು, ಕಾಶ್ಮೀರ, ಭಯೋತ್ಪಾದನೆ, ನೀರು ಮತ್ತು ವ್ಯಾಪಾರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಭಾರತದೊಂದಿಗೆ ಮಾತುಕತೆ ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಟರ್ಕಿಯಿಂದ ಇರಾನ್ಗೆ ಬಂದಿಳಿದ ಷರೀಫ್ ಅವರನ್ನು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಸಾದಾಬಾದ್ ಅರಮನೆಯಲ್ಲಿ ಸ್ವಾಗತಿಸಿದರು. ಈ ವೇಳೆ ಪೆಜೆಶ್ಕಿಯಾನ್ ಜೊತೆಗೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಷರೀಫ್, ಶಾಂತಿಗಾಗಿ ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದರು.
ಕಾಶ್ಮೀರ, ನೀರು ಸೇರಿದಂತೆ ಎಲ್ಲ ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ. ನಾವು ಕೂಡ ನೆರೆಯ ದೇಶದೊಂದಿಗೆ ವ್ಯಾಪಾರ ಮತ್ತು ಭಯೋತ್ಪಾದನೆ ಎದುರಿಸುವ ಕುರಿತು ಮಾತುಕತೆ ನಡೆಸಲು ಸಿದ್ಧ ಎಂದರು. ಇದೇ ವೇಳೆ ಭಾರತ ಯುದ್ಧವನ್ನು ಆಯ್ಕೆ ಮಾಡಿಕೊಂಡಲ್ಲಿ ಅದನ್ನು ಎದುರಿಸಲು ಸಿದ್ಧ ಎನ್ನುವ ಮೂಲಕ ಎಚ್ಚರಿಕೆಯನ್ನು ನೀಡಿದರು. ಈ ಹಿಂದೆ ಹೇಳಿದಂತೆ ಆಕ್ರಮಣಕಾರಿ ಮಾರ್ಗ ಆರಿಸಿಕೊಂಡರೆ, ನಾವು ನಮ್ಮ ಪ್ರದೇಶವನ್ನು ರಕ್ಷಿಸಿಕೊಳ್ಳುತ್ತೇವೆ. ಅವರು ಶಾಂತಿಯನ್ನು ಸ್ವೀಕರಿಸಿದರೆ, ನಾವು ಕೂಡ ನಿಜವಾಗಿಯೂ ಗಂಭೀರವಾಗಿ ಮತ್ತು ಪ್ರಾಮಾಣಿಕವಾಗಿ ಶಾಂತಿಯನ್ನು ಬಯಸುತ್ತೇವೆ ಎಂದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವುದು ಮತ್ತು ಭಯೋತ್ಪಾದನೆಯ ವಿಷಯದ ಬಗ್ಗೆ ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಾಗಿ ಭಾರತ ಈಗಾಗಲೇ ಸ್ಪಷ್ಟಪಡಿಸಿದೆ. ಭಾರತದೊಂದಿಗಿನ ನಾಲ್ಕು ದಿನಗಳ ಸೇನಾ ಸಂಘರ್ಷದಲ್ಲಿ ನಾವು ಗೆದ್ದಿದ್ದೇವೆ ಎಂದು ಷರೀಫ್ ಹೇಳಿದ್ದಾರೆ.