ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕಾಲ ತವರು ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದು, ಸೋಮವಾರ ಬೆಳಗ್ಗೆ ವಡೋದರಾದಲ್ಲಿ ಭರ್ಜರಿ ರೋಡ್ಶೋ ಮೂಲಕ ಅವರಿಗೆ ಸ್ವಾಗತ ಕೋರಲಾಯಿತು. ದಾಹೋದ್, ಭುಜ್ ಮತ್ತು ಗಾಂಧಿನಗರದಲ್ಲಿ 82,950 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಅವರು ಗುಜರಾತ್ಗೆ ಆಗಮಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೋಮವಾರ ಬೆಳಗ್ಗೆ ವಡೋದರಾ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ 1 ಕಿ.ಮೀ ಉದ್ದದ ಭರ್ಜರಿ ರೋಡ್ಶೋನಲ್ಲಿ ಅವರು ಭಾಗಿಯಾದರು. ಈ ವೇಳೆ ಪಾಕಿಸ್ತಾನಿ ಉಗ್ರರ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿನ ಯಶಸ್ಸಿಗೆ ರಸ್ತೆಯ ಎರಡು ಬದಿಯಲ್ಲೂ ಜನರು ಹರ್ಷೋದ್ಘಾರ ಮೊಳಗಿಸಿದರು.
ದಾಹೋದ್ ತಲುಪಲಿರುವ ಅವರು, ಇಲ್ಲಿ ಲೋಕೋ ಮ್ಯಾನುಫ್ಯಾಕ್ಚರಿಂಗ್ ಶಾಪ್-ರೋಲಿಂಗ್ ಸ್ಟಾಕ್ ಕಾರ್ಯಾಗಾರವನ್ನು ಉದ್ಘಾಟಿಸಿದ್ದಾರೆ. ಬಳಿಕ ಖರೋಡ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಲಿದ್ದು, ಈ ವೇಳೆ ಅವರು ಸುಮಾರು 24,000 ಕೋಟಿ ರೂ. ಮೌಲ್ಯದ ವಿವಿಧ ಸರ್ಕಾರಿ ಮತ್ತು ರೈಲ್ವೆ ಯೋಜನೆಗಳಿಗೆ ಅಡಿಪಾಯ ಹಾಕಿದ್ದಾರೆ.
ಇದೇ ವೇಳೆ ಅವರು, ದಾಹೋದ್‌ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಎರಡು ರೈಲುಗಳಿಗೆ ಚಾಲನೆ ನೀಡಿದ್ದಾರೆ. ಮೊದಲನೆಯದಾದ ಸಬರಮತಿ- ವೆರಾವಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ. ಇದು ವಾರದಲ್ಲಿ ಆರು ದಿನ ಪ್ರಯಾಣ ನಡೆಸಲಿದೆ. ಎರಡನೇ ರೈಲು ಸೇವೆ ವಲ್ಸಾದ್-ದಹೋಡ್ ಎಕ್ಸ್‌ಪ್ರೆಸ್ ಆಗಿದ್ದು, ಪ್ರತಿದಿನ 17 ಬೋಗಿಗಳೊಂದಿಗೆ 346 ಕಿ.ಮೀ ದೂರವನ್ನು ಕ್ರಮಿಸಲಿದೆ.
ದಾಹೋದ್‌ನಲ್ಲಿ ಮೇಕ್ ಇನ್ ಇಂಡಿಯಾ ಅಡಿ 21,000 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ರೈಲ್ವೆ ಉತ್ಪಾದನಾ ಘಟಕವನ್ನು ಮೋದಿ ಉದ್ಘಾಟಿಸಿದ್ದಾರೆ. ದಾಹೋದ್ ಉತ್ಪಾದನಾ ಘಟಕದಿಂದ ವಿದ್ಯುತ್ ಲೋಕೋ ಮೋಟಿವ್ ಉದ್ಘಾಟಿಸಿದ್ದಾರೆ. ಇದಾದ ಬಳಿಕ ಅವರು, ಭುಜ್‌ಗೆ ಪ್ರಯಾಣಿಸಲಿದ್ದು, ಇಲ್ಲಿ 53,400 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಕಾಂಡ್ಲಾ ಬಂದರು, ಸೌರಶಕ್ತಿ, ವಿದ್ಯುತ್ ಪ್ರಸರಣ ಮತ್ತು ರಸ್ತೆ ಮೂಲಸೌಕರ್ಯಗಳು ಸೇರಿದೆ. ಮಹಿಸಾಗರ್ ಮತ್ತು ದಾಹೋದ್ ಜಿಲ್ಲೆಯಲ್ಲಿ 181 ಕೋಟಿ ರೂ ವೆಚ್ಚದ ನಾಲ್ಕು ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 1,006 ಕೋಟಿ ರೂ.ಗಳಲ್ಲಿ ನಿರ್ಮಿಸಲಾದ 22,055 ಮನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. 1,000 ಕೋಟಿ ರೂ. ವೆಚ್ಚದ ಸಬರಮತಿ ನದಿ ದಂಡೆಯ 3 ನೇ ಹಂತಕ್ಕೆ ಶಂಕು ಸ್ಥಾಪನೆಯಂತಹ ಪ್ರಮುಖ ಯೋಜನೆಯ ಉದ್ಘಾಟನೆ ನೆರವೇರಿಸಿದ್ದಾರೆ.