ಅಮೆರಿಕ: ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳೊಂದಿಗೆ ಮಾತುಕತೆಗೆ ವಿಳಂಬ ಮಾಡುತ್ತಿದ್ದಾರೆ ಎಂಬ ಕಾರಣ ಮುಂದಿಟ್ಟುಕೊಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜೂನ್ 1 ರಿಂದ ಜುಲೈ 9 ರವರೆಗೆ ಯುರೋಪಿಯನ್ ಒಕ್ಕೂಟದ ಸರಕುಗಳ ಮೇಲೆ ಶೇ 50 ಸುಂಕವನ್ನು ಹಾಕುವುದಾಗಿ ಶುಕ್ರವಾರ ಬೆದರಿಕೆ ಹಾಕಿದ್ದಾರೆ. ಟ್ರಂಪ್ ಅವರ ಈ ಬೆದರಿಕೆ ಬಳಿಕ ಸುಂಕಗಳ ಬಗ್ಗೆ ಯುರೋಪಿಯನ್ ಒಕ್ಕೂಟ ಗಂಭೀರ ಮಾತುಕತೆ ನಡೆಸುತ್ತೇವೆ ಎಂದು ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಟ್ರಂಪ್‌ಗೆ ಭರವಸೆ ನೀಡಿದ್ದಾರೆ. ಹೀಗಂತಾ ಅಮೆರಿಕ ಅಧ್ಯಕ್ಷರು ಭಾನುವಾರ ಹೇಳಿಕೊಂಡಿದ್ದಾರೆ.
ನಾನು ಈಗಾಗಲೇ ಅವರಿಗೆ ಹೇಳಿದ್ದೇನೆ, ನೀವು ನಮ್ಮೊಂದಿಗೆ ಒಪ್ಪಂದಕ್ಕೆ ಬರುವಂತೆ ತಿಳಿಸಿದ್ದೇನೆ ಎಂದು ಟ್ರಂಪ್ ಭಾನುವಾರ ನ್ಯೂಜೆರ್ಸಿಯ ಮಾರಿಸ್ಟೌನ್ ನಿಂದ ವಾಷಿಂಗ್ಟನ್‌ಗೆ ಮರಳಲು ಸಿದ್ಧರಾಗುತ್ತಿದಾಗ ಮಾಧ್ಯಮಗಳಿಗೆ ತಿಳಿಸಿದ್ದಾರೆ. ತ್ವರಿತವಾಗಿ ಸಭೆ ಸೇರಿ ಈ ಬಗ್ಗೆ ಸೂಕ್ತ ಪರಿಹಾರ ಕಂಡು ಹಿಡಿಯಬಹುದೇ ಎಂದು ನೋಡೋಣ ಎಂದು ಯುರೋಪಿಯನ್ ಆಯೋಗದ ಅಧಕ್ಷೆ ವಾನ್ ಡೆರ್ ಲೇಯೆನ್ ಆಶ್ವಾಸನೆ ನೀಡಿದ್ದಾರೆ ಎಂದು ಟ್ರಂಪ್ ಹೇಳಿದರು. ಶುಕ್ರವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಟ್ರಂಪ್ EU ಸರಕುಗಳ ಮೇಲೆ ಶೇ 50ರಷ್ಟು ಸುಂಕವನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದರು, 27 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ಒಕ್ಕೂಟವನ್ನು ನಿಭಾಯಿಸುವುದು ತುಂಬಾ ಕಷ್ಟಕರವಾಗಿದೆ. ಮಾತುಕತೆಗಳು ಒಂದು ಹಂತಕ್ಕೆ ಬರುತ್ತಿಲ್ಲ ಎಂದು ಟ್ರಂಪ್ ಅಸಮಾಧಾನ ಹೊರ ಹಾಕಿದ್ದರು.
ಟ್ರಂಪ್ ಜತೆ ದೂರವಾಣಿ ಕರೆ ಮಾಡಿ ಮಾತನಾಡಿದ ಬಳಿಕ ಮಾತನಾಡಿರುವ ಯುರೋಪಿಯನ್ ಆಯೋಗದ ಅಧ್ಯಕ್ಷರು, ತನ್ನ ಪಾಲಿಗೆ, EU ಮತ್ತು US ವಿಶ್ವದ ಅತ್ಯಂತ ಪರಿಣಾಮಕಾರಿ ಮತ್ತು ನಿಕಟ ವ್ಯಾಪಾರ ಸಂಬಂಧವನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ. ಯುರೋಪ್ ತ್ವರಿತವಾಗಿ ಮತ್ತು ನಿರ್ಣಾಯಕವಾಗಿ ಮಾತುಕತೆಗಳನ್ನು ಮುಂದುವರಿಸಲು ಸಿದ್ಧವಾಗಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಸಮಗ್ರವಾಗಿ ಚರ್ಚಿಸಿ ಫಲಪ್ರದವಾದ ಒಪ್ಪಂದಕ್ಕೆ ಬರಲು ನಮಗೆ ಜುಲೈ 9 ರವರೆಗೆ ಸಮಯ ಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.