ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಇಡೀ ದೇಶವೇ ಹಾಡಿ ಹೊಗಳುತ್ತಿದೆ. ಭಾನುವಾರ ನಡೆದ ಬಿಜೆಪಿ ನೇತೃತ್ವದ ಎನ್ಡಿಎ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ಸಭೆಯಲ್ಲಿ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಧೈರ್ಯಶಾಲಿ ನಾಯಕತ್ವವನ್ನು ಶ್ಲಾಘಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಎನ್ಡಿಎ ಕೂಟದ 19 ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಎನ್ಡಿಎ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಬಗ್ಗೆ ಮಾಹಿತಿ ನೀಡಿದ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಭಾರತೀಯರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿರುವ ಅವರು, ಪ್ರಧಾನಿ ಯಾವಾಗಲೂ ಸಶಸ್ತ್ರ ಪಡೆಗಳನ್ನು ಬೆಂಬಲಿಸಿದ್ದಾರೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಭಯೋತ್ಪಾದಕರು ಮತ್ತು ಅವರಿಗೆ ಬೆಂಬಲವಾಗಿರುವವರಿಗೆ ಸೂಕ್ತ ಉತ್ತರ ನೀಡಿದೆ ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ತಿವಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಸಲಾದ ಆಪರೇಷನ್ ಸಿಂಧೂರ ಕಾರ್ಯಾಚರಣೆಯು ನಮ್ಮ ಸೇನಾಪಡೆಗಳ ಶೌರ್ಯ ಮತ್ತು ಸಾಹಸಕ್ಕೆ ಸಾಕ್ಷಿಯಾಗಿದೆ. ಇದನ್ನು ಇಡೀ ದೇಶವೇ ಕೊಂಡಾಡುತ್ತಿದೆ ಎಂದರು.
ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಸಶಸ್ತ್ರ ಪಡೆಗಳು ತೋರಿದ ಧೈರ್ಯ, ಸಾಹಸವನ್ನು ಪ್ರಧಾನಿ ಮೋದಿ ಅವರು ಮೆಚ್ಚಿಕೊಂಡಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ನಾವು ಇನ್ನಷ್ಟು ವೇಗವಾಗಿ ಕೆಲಸ ಮಾಡಬೇಕು. ಸಬಲೀಕರಣವನ್ನು ಸಾಧಿಸುವತ್ತ ಗಮನಹರಿಸಬೇಕು ಎಂದು ಪ್ರಧಾನಿ ಹೇಳಿದ್ದಾಗಿ ಅವರು ತಿಳಿಸಿದ್ದಾರೆ. ಹಲವಾರು ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳ ಯೋಜನೆಗಳ ಕುರಿತು ಪ್ರಸ್ತಾಪಿಸಿದರು. ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಸಭೆಯು ಗೌರವ ಸಲ್ಲಿಸಿತು.