ನವದೆಹಲಿ: ವಿಕಸಿತ ಭಾರತ ಪ್ರತಿಯೊಬ್ಬ ಭಾರತೀಯನ ಗುರಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಟೀಮ್ ಇಂಡಿಯಾದಂತೆ ಒಟ್ಟಾಗಿ ಕೆಲಸ ಮಾಡಿದರೆ, ಯಾವುದೇ ಗುರಿ ಅಸಾಧ್ಯವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಭಾರತ್ ಮಂಟಪದಲ್ಲಿ ನಡೆದ ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನಿ, ಪ್ರತಿಯೊಂದು ರಾಜ್ಯವೂ ವಿಕಸಿತವಾದಾಗ, ಭಾರತವು ವಿಕಸಿತವಾಗುತ್ತದೆ. ಇದು ದೇಶದ 140 ಕೋಟಿ ನಾಗರಿಕರ ಆಕಾಂಕ್ಷೆಯಾಗಿದೆ. ರಾಜ್ಯಗಳು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಕನಿಷ್ಠ ಒಂದು ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಬೇಕು ಮತ್ತು ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದರು.
ಒಂದು ರಾಜ್ಯ, ಒಂದು ಜಾಗತಿಕ ತಾಣ. ಇದು ನೆರೆಯ ನಗರಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಕಾರಣವಾಗುತ್ತದೆ. ಭಾರತ ವೇಗವಾಗಿ ನಗರೀಕರಣಗೊಳ್ಳುತ್ತಿದೆ. ಭವಿಷ್ಯಕ್ಕೆ ಸಿದ್ಧವಾಗಿರುವ ನಗರಗಳಿಗಾಗಿ ನಾವು ಕೆಲಸ ಮಾಡಬೇಕು. ಬೆಳವಣಿಗೆ, ನಾವೀನ್ಯತೆ ಮತ್ತು ಸುಸ್ಥಿರತೆಯು ನಮ್ಮ ನಗರಗಳ ಅಭಿವೃದ್ಧಿಯ ಇಂಜಿನ್ ಆಗಿರಬೇಕು ಎಂದು ಹೇಳಿದರು. ಈ ವರ್ಷದ ಆಡಳಿತ ಮಂಡಳಿ ಸಭೆಯ ಧ್ಯೇಯ 'ವಿಕಿಸಿತ ಭಾರತಕ್ಕಾಗಿ ವಿಕಸಿತ ರಾಜ್ಯ@2047'. ರಾಜ್ಯಗಳ ಮೇಲೆ ಕೇಂದ್ರೀಕರಿಸಿ ಮತ್ತು ಆ ಮೂಲಕ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು. ನೀತಿ ಆಯೋಗದ ಸರ್ವೋಚ್ಚ ಸಂಸ್ಥೆಯಾದ ಮಂಡಳಿಯು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಹಲವು ಕೇಂದ್ರ ಸಚಿವರನ್ನು ಒಳಗೊಂಡಿದೆ. ಪ್ರಧಾನಿ ಮೋದಿ ನೀತಿ ಆಯೋಗದ ಅಧ್ಯಕ್ಷರಾಗಿದ್ದಾರೆ.