ಇಸ್ಲಾಮಾಬಾದ್: ಭಾರತೀಯ ಹೈ ಕಮಿಷನರ್ ಸಿಬ್ಬಂದಿಗಳನ್ನು ಹೊರಹಾಕಿರುವುದಾಗಿ ಪಾಕಿಸ್ತಾನ ತಿಳಿಸಿದೆ. ಈ ಕ್ರಮದ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ಕಚೇರಿ, ಪಾಕಿಸ್ತಾನ ಸರ್ಕಾರವು ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನ್‌ನ ಸಿಬ್ಬಂದಿಯನ್ನು ಅವರ ವಿಶೇಷ ಸ್ಥಾನಮಾನಕ್ಕೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಸಂಬಂಧಪಟ್ಟ ಅಧಿಕಾರಿಯನ್ನು 24 ಗಂಟೆಗಳ ಒಳಗೆ ಪಾಕಿಸ್ತಾನ ತೊರೆಯುವಂತೆ ನಿರ್ದೇಶಿಸಲಾಗಿದೆ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ವಿಚಾರವನ್ನು ತಿಳಿಸಲು ಭಾರತದ ಉಸ್ತವಾರಿ ಅಧಿಕಾರಿಗಳನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಯಲಾಗಿದೆ ಎಂದು ಹೇಳಿದೆ.
ಇದಕ್ಕೆ ಮುನ್ನ ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಅಧಿಕಾರಿಯನ್ನು ಹೊರ ಹಾಕಿರುವುದಾಗಿ ಭಾರತ ತಿಳಿಸಿತ್ತು. ಒಂದು ವಾರ ಕಾಲ ಈ ಗಡೀಪಾರು ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಮೇ 13ರಂದು ಬೇಹುಗಾರಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ಭಾರತವು ಮತ್ತೊಬ್ಬ ಪಾಕಿಸ್ತಾನಿ ಅಧಿಕಾರಿಯನ್ನು ಹೊರಹಾಕಿತ್ತು. ಭಾರತದ ಕ್ರಮದ ಬೆನ್ನಲ್ಲೇ ಇದೀಗ ಪಾಕಿಸ್ತಾನ ಕೂಡ ಇಸ್ಲಾಮಾಬಾದ್ನಲ್ಲಿನ ಭಾರತೀಯ ಹೈ ಕಮಿಷನ್ ಸಿಬ್ಬಂದಿಯನ್ನು ಹೊರ ಹಾಕಿದೆ. ಇದೇ ವೇಳೆ ಪ್ರಕಟಣೆಯಲ್ಲಿ ಭಾರತೀಯ ಹೈಕಮಿಷನ್‌ನ ಯಾವುದೇ ರಾಜತಾಂತ್ರಿಕರು ಅಥವಾ ಸಿಬ್ಬಂದಿಗಳು ತಮ್ಮ ಸವಲತ್ತುಗಳು ಮತ್ತು ಸ್ಥಾನಮಾನವನ್ನು ಯಾವುದೇ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಬಾರದು ಎಂದು ಒತ್ತಿ ಹೇಳಲಾಗಿದೆ ಎಂದು ತಿಳಿಸಲಾಗಿದೆ.