ರಾಜಸ್ಥಾನ : "ಭಾರತದ ಮಹಿಳೆಯರ ಸಿಂಧೂರವನ್ನು ಅಳಿಸಲು ಹೊರಟ ಪಾಕಿಸ್ತಾನವನ್ನು ಧೂಳೀಪಟ ಮಾಡಿದ್ದೇವೆ. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ 22 ನಿಮಿಷದಲ್ಲಿ ಅದರ ನೆಲದಲ್ಲಿದ್ದ 9 ಉಗ್ರ ನೆಲೆಗಳನ್ನು ಧ್ವಂಸ ಮಾಡಿದ್ದೇವೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಜಸ್ಥಾನದ ಬಿಕಾನೇರ್ನಲ್ಲಿ ಇಂದು ನಡೆದ ಬಹಿರಂಗ ಸಮಾವೇಶದಲ್ಲಿ ಭಾರತೀಯ ಸೇನೆ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ ಅವರು, ಪ್ರತಿ ಹನಿ ರಕ್ತಕ್ಕೂ ಪ್ರತೀಕಾರ ತೀರಿಸಿಕೊಂಡಿದ್ದೇವೆ. ಪಾಕ್ ಸೇನೆಯನ್ನು ಭಾರತೀಯ ಸೇನೆಯ ಮುಂದೆ ಮಂಡಿಯೂರುವಂತೆ ಮಾಡಿದ್ದೇವೆ. ಪಾಕಿಸ್ತಾನದ ನೆಲಕ್ಕೆ ನುಗ್ಗಿ ಅಲ್ಲಿನ ಉಗ್ರ ನೆಲೆಗಳನ್ನು ಉಡೀಸ್ ಮಾಡಿದ್ದೇವೆ. ಇದು ನಮ್ಮ ಸೇನೆಯ ತಾಕತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಾಕಿಸ್ತಾನದ ಭಯೋತ್ಪಾದನಾ ನೀತಿಯ ವಿರುದ್ಧ ನಮ್ಮ ಸಶಸ್ತ್ರ ಪಡೆಗಳಿಗೆ ಪರಮಾಧಿಕಾರ ನೀಡಲಾಗಿದೆ. ಪಾಕಿಸ್ತಾನ ಸೇನೆ ಮತ್ತು ಅದರ ಆರ್ಥಿಕತೆಯು ಪ್ರತಿಯೊಂದು ಭಯೋತ್ಪಾದಕ ದಾಳಿಗೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಭಾರತ ಸ್ಪಷ್ಟಪಡಿಸಿದೆ ಎಂದು ಪ್ರಧಾನಿ ಹೇಳಿದರು. ಭಾರತೀಯರ ರಕ್ತದೊಂದಿಗೆ ಆಟವಾಡಿದ್ದಕ್ಕಾಗಿ ಪಾಕಿಸ್ತಾನ ಭಾರೀ ಬೆಲೆ ತೆರಲೇಬೇಕು. ಭಾರತಕ್ಕೆ ನ್ಯಾಯಯುತವಾಗಿ ಸೇರಬೇಕಾದ ನೀರು ಪಾಕ್‌ಗೆ ಇನ್ನು ಮುಂದೆ ಸಿಗುವುದಿಲ್ಲ ಎಂದು ಹೇಳುವ ಮೂಲಕ ಸಿಂಧು ನದಿ ನೀರು ಒಪ್ಪಂದ ಅಮಾನತು ಮುಂದುವರಿಯಲಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದರು.
ಪಾಕಿಸ್ತಾನದೊಂದಿಗೆ ಒಂದೆಡೆ ವ್ಯಾಪಾರ ಇನ್ನೊಂದೆಡೆ ಮಾತುಕತೆ ನಡೆಯಲು ಸಾಧ್ಯವಿಲ್ಲ. ಮಾತುಕತೆ ಮಾಡಬೇಕಿದ್ದರೆ ಅದು ಪಾಕ್ ಆಕ್ರಮಿಸಿಕೊಂಡಿರುವ ಕಾಶ್ಮೀರದ ಬಗ್ಗೆ ಮಾತ್ರ ಆಗಿರುತ್ತದೆ. ನನ್ನ ನರ- ನಾಡಿಗಳಲ್ಲಿ ಹರಿಯುತ್ತಿರುವುದು ಬರಿ ರಕ್ತವಲ್ಲ, ಸಿಂಧೂರ ಎಂದು ಪ್ರಧಾನಿ ಮೋದಿ ಗುಡುಗಿದರು. ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ದಾಳಿಗೆ ನಡೆಸಲಿದೆ ಎಂದು ಅರಿತ ಪಾಕಿಸ್ತಾನವು ತನ್ನಲ್ಲಿರುವ ಅಣ್ವಸ್ತ್ರಗಳ ಮೂಲಕ ಮರು ದಾಳಿ ಮಾಡುವುದಾಗಿ ಬೆದರಿಕೆ ಹಾಕಿತ್ತು. ಇದಕ್ಕೆ ಭಾರತ ಹೆದರುವುದಿಲ್ಲ ಎಂಬುದು ಈಗ ಆ ದೇಶಕ್ಕೆ ಗೊತ್ತಾಗಿದೆ. ಭಾರತೀಯ ಸೇನೆಯ ನಿಖರ ದಾಳಿಯಿಂದಾಗಿ ಪಾಕಿಸ್ತಾನದ ರಹೀಮ್ ಯಾರ್ ಖಾನ್ ವಾಯುನೆಲೆ ಛಿದ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.