ಇಸ್ರೇಲ್ : ಭಯೋತ್ಪಾದನೆ ವಿರುದ್ಧ ಅಂತಾರಾಷ್ಟ್ರೀಯ ಒಕ್ಕೂಟವನ್ನು ರಚಿಸಬೇಕೆಂದು ಕರೆ ನೀಡಿರುವ ಇಸ್ರೇಲ್‌ನಲ್ಲಿರುವ ಭಾರತದ ರಾಯಭಾರಿ ಜೆ.ಪಿ. ಸಿಂಗ್, ಪಾಕಿಸ್ತಾನದ ವಿರುದ್ಧ ಭಾರತದ ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ, ಅದಕ್ಕೆ ವಿರಾಮ ನೀಡಲಾಗಿದೆ ಅಷ್ಟೇ ಎಂದು ತಿಳಿಸಿದ್ದಾರೆ. ಇಸ್ರೇಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಂಗ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ, ಇಸ್ರೇಲ್ ಮತ್ತು ಭಯೋತ್ಪಾದನೆಯನ್ನು ಎದುರಿಸುತ್ತಿರುವ ಇತರೆ ಎಲ್ಲಾ ದೇಶಗಳು, ರಾಜತಾಂತ್ರಿಕ ವ್ಯಾಪ್ತಿಯನ್ನು ವಿಸ್ತರಿಸಬೇಕಾಗಿದೆ. ನಾವು ಪರಸ್ಪರ ಸಹಕರಿಸಬೇಕು, ಭಯೋತ್ಪಾದನೆಯ ವಿರುದ್ಧ ಮತ್ತು ಮುಖ್ಯವಾಗಿ ಈ ಭಯೋತ್ಪಾದಕ ಸಂಘಟನೆಗಳ ಬೆಂಬಲಿಗರ ವಿರುದ್ಧ ನಾವು ಒಕ್ಕೂಟವನ್ನು ರಚಿಸಬೇಕಾಗಿದೆ ಎಂದರು.
"ಭಯೋತ್ಪಾದಕರು ಧರ್ಮದ ಆಧಾರದ ಮೇಲೆ ಜನರನ್ನು ಕೊಂದರು. ಅವರನ್ನು ಕೊಲ್ಲುವ ಮೊದಲು ನಿಮ್ಮದು ಯಾವ ಧರ್ಮ ಎಂದು ಕೇಳಿದರು. ಪಹಲ್ಗಾಮ್ ಘಟನೆಯಲ್ಲಿ 26 ಅಮಾಯಕರು ಬಲಿಯಾದರು. ಭಾರತದ ಕಾರ್ಯಾಚರಣೆಯು ಭಯೋತ್ಪಾದಕ ನೆಲೆಗಳ ಮೇಲಾಗಿತ್ತು. ಆದರೆ ಪಾಕಿಸ್ತಾನವು ಇದಕ್ಕೆ ಪ್ರತಿಯಾಗಿ ಭಾರತದ ಮಿಲಿಟರಿ ಚೆಕ್ಪೋಸ್ಟ್ಗಳ ಮೇಲೆ ದಾಳಿ ಮಾಡಿತು" ಎಂದರು.
ಕದನ ವಿರಾಮ ಮುಂದುವರೆದಿದೆಯೇ ಎಂದು ಕೇಳಿದಾಗ, ಕದನ ವಿರಾಮ ಮುಂದುವರೆದಿದೆ. ಆಪರೇಷನ್ ಸಿಂಧೂರ್ಗೆ ವಿರಾಮ ನೀಡಿದ್ದೇವೆ. ಆದರೆ ಇನ್ನೂ ಮುಗಿದಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಭಯೋತ್ಪಾದನೆಯ ವಿರುದ್ಧದ ಹೋರಾಟ ಮುಂದುವರಿಯುತ್ತದೆ. ನಾವು ಹೊಸ ಹೊಸ ಆಕ್ರಮಣಕಾರಿ ತಂತ್ರ ಅನುಸರಿಸುತ್ತೇವೆ. ಭಯೋತ್ಪಾದಕರು ಎಲ್ಲೇ ಇದ್ದರೂ, ನಾವು ಆ ಭಯೋತ್ಪಾದಕರನ್ನು ಕೊಲ್ಲಬೇಕು ಮತ್ತು ಅವರ ನೆಲೆಗಳನ್ನು ನಾಶಪಡಿಸಬೇಕು. ಆದ್ದರಿಂದ ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ. ಆದರೆ ಕದನ ವಿರಾಮ ಮುಂದುವರೆದಿದೆ" ಎಂದು ಸ್ಪಷ್ಟಪಡಿಸಿದರು.
ಮೇ.10 ರಂದು ಬೆಳಗಿನ ಜಾವ ಪಾಕ್ನ ನೂರ್ ಖಾನ್ ವಾಯು ನೆಲೆಯ ಮೇಲೆ ಭಾರತ ನಡೆಸಿದ ದಾಳಿಯನ್ನು 'ಗೇಮ್ ಚೇಂಜರ್' ಎಂದು ಬಣ್ಣಿಸಿದ ಸಿಂಗ್, ಇದು ಪಾಕಿಸ್ತಾನದಲ್ಲಿ ಭೀತಿಯನ್ನು ಸೃಷ್ಟಿಸಿತು ಮತ್ತು ಅವರ ಡಿಜಿಎಂಒ ಕದನ ವಿರಾಮಕ್ಕಾಗಿ ಭಾರತವನ್ನು ಸಂಪರ್ಕಿಸಿದ್ದರು ಎಂದರು.
ಪಾಕಿಸ್ತಾನವು "ಯುದ್ಧದ ಕೃತ್ಯ" ಎಂದು ಬಣ್ಣಿಸಿರುವ ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಅಮಾನತುಗೊಳಿಸಿರುವ ಕುರಿತ ಪ್ರಶ್ನೆಗೆ, ಒಪ್ಪಂದದ ವೇಳೆ ಬಳಸಿದ ಎರಡು ಪ್ರಮುಖ ಪದಗಳನ್ನು ಪಾಕಿಸ್ತಾನ ಎಂದಿಗೂ ಗೌರವಿಸಿಲ್ಲ. ಇದರಿಂದ ಭಾರತವು ಯಾವಾಗಲೂ ಪಾಕಿಸ್ತಾನದಿಂದ ಎದುರಾಗುವ ಭಯೋತ್ಪಾದಕ ದಾಳಿಗಳ ವಿರುದ್ಧ ಹೋರಾಡುತ್ತಿದೆ. ಐಡಬ್ಲ್ಯೂಟಿಗೆ 1960 ರಲ್ಲಿ ಸಹಿ ಹಾಕಲಾಯಿತು ಮತ್ತು ಒಪ್ಪಂದದ ಪೀಠಿಕೆಯಲ್ಲಿ ಸದ್ಭಾವನೆ ಮತ್ತು ಸ್ನೇಹ ಎಂಬ ಎರಡು ಪ್ರಮುಖ ಪದಗಳಿವೆ. ಕಳೆದ ಹಲವು ವರ್ಷಗಳಿಂದ ನಾವು ನೀರು ಹರಿಯಲು ಬಿಡುತ್ತಿದ್ದೆವು. ಪಾಕಿಸ್ತಾನ ಏನು ಮಾಡುತ್ತಿತ್ತು, ಭಾರತದ ಮೇಲಿನ ಭಯೋತ್ಪಾದಕ ದಾಳಿಗೆ ಅವಕಾಶ ನೀಡುತ್ತಿತ್ತು ಎಂದು ಕಿಡಿಕಾರಿದರು.