ಹೈದರಾಬಾದ್: ಬಾಂಬ್ ಸ್ಫೋಟ ನಡೆಸಲು ಮುಂದಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಆಂಧ್ರಪ್ರದೇಶ ಮತ್ತು ತೆಲಂಗಾಣ ಪೊಲೀಸರು, ಪ್ರಮುಖ ಭಯೋತ್ಪಾದನಾ ಸಂಚನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡೂ ರಾಜ್ಯಗಳ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಆಂಧ್ರಪ್ರದೇಶದ ವಿಜಯನಗರದ ಸಿರಾಜ್-ಉರ್ ರೆಹಮಾನ್ (29) ಮತ್ತು ಸಿಕಂದರಾಬಾದ್‌ನ ಬೋಹಿಗುಡ ನಿವಾಸಿ ಸಯೀದ್ ಸಮೀರ್ (28) ಎಂಬ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ಸಿರಾಜ್ ಎಂಜಿನಿಯರಿಂಗ್ ಪದವೀಧರನಾಗಿದ್ದರೆ, ಸಮೀರ್ ಲಿಫ್ಟ್ ಆಪರೇಟರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ವಿಜಯನಗರಂನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದು, ಬಳಿಕ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಇಬ್ಬರು ಶಂಕಿತರು, ತಮ್ಮ ಕೃತ್ಯ ಎಸಗಲು ಅಲ್-ಹಿಂದ್ ಇತ್ತೆಹಾದುಲ್ ಮುಸ್ಲಿಮೀನ್ (ಎಹೆಚ್ಐಎಂ) ಎಂಬ ಹೆಸರಿನ ಗುಂಪನ್ನು ರಚಿಸಿಕೊಂಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ವಿಜಯನಗರಂ ಬಳಿ ಬಾಂಬ್ ಸ್ಪೋಟ ನಡೆಸಲು ಇವರು ತಯಾರಿ ನಡೆಸಿದ್ದರು. ಇದಕ್ಕಾಗಿ ಆನ್‌ಲೈನ್‌ನಲ್ಲಿ ಸ್ಫೋಟಕಗಳನ್ನು ಖರೀದಿಸಿದ್ದರು. ಈ ಇಬ್ಬರು ಸಾಮಾಜಿಕ ಜಾಲತಾಣದ ಮೂಲಕ ಸೌದಿ ಅರೇಬಿಯಾದ ವ್ಯಕ್ತಿ ಜೊತೆ ಸಂಪರ್ಕದಲ್ಲಿದ್ದು, ಆತ ಐಎಸ್ಐಎಸ್ ಶಂಕಿತನಾಗಿದ್ದಾನೆ. ಆತನೇ ಇಬ್ಬರಿಗೂ ಭಯೋತ್ಪಾದನಾ ಚಟುವಟಿಕೆ ನಡೆಸಲು ಮಾರ್ಗದರ್ಶನ ನೀಡುತ್ತಿದ್ದ. ಬಂಧಿತರಿಬ್ಬರೂ ಸ್ಪೋಟಕಗಳನ್ನು ಆನ್‌ಲೈನ್‌ನಲ್ಲಿ ಖರೀದಿ ಮಾಡುವ ಜೊತೆಗೆ, ಅದರ ಕಾರ್ಯಾಚರಣೆಯ ಮಾಹಿತಿಯನ್ನು ಕೂಡ ಆನ್ಲೈನ್ನಲ್ಲೇ ಪಡೆದಿದ್ದರು. ಮೇ21 ಮತ್ತು 22ರಂದು ಅವರು ವಿಜಯನಗರಂನ ಹೊರವಲಯದಲ್ಲಿ ಈ ಸ್ಪೋಟ ನಡೆಸಲು ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಖಚಿತ ಮಾಹಿತಿ ಪಡೆದ ಎರಡು ರಾಜ್ಯದ ಪೊಲೀಸರು ಇಬ್ಬರನ್ನು ಬಂಧಿಸುವ ಮೂಲಕ ಇವರ ಸಂಚನ್ನು ವಿಫಲಗೊಳಿಸಿದ್ದಾರೆ. ಈ ಶಂಕಿತರು ಕೆಲವು ಯುವಕರನ್ನು ಭೇಟಿಯಾಗಿರುವುದು ತಿಳಿದು ಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಸಿರಾಜ್ ಹೈದರಾಬಾದ್ಗೆ ಗ್ರೂಪ್2 ಪರೀಕ್ಷೆ ಸಿದ್ಧತೆಗೆ ಬಂದಿದ್ದು, ಅಲ್ಲಿಯೇ ನೆಲೆಸಿದ್ದ. ಕೆಲವು ಬಾರಿ ಸಮೀರ್ನನ್ನು ಭೇಟಿಯಾಗಿದ್ದಾನೆ. ಇದಾದ ಬಳಿಕ, ಸಿರಾಜ್ ವಿಜಯನಗರಂಗೆ ಪರೀಕ್ಷೆ ಬರೆಯಲು ಆಗಮಿಸಿದ್ದು, ಈ ವೇಳೆ ವಿಜಯನಗರಂ ವಿಳಾಸಕ್ಕೆ ಕೆಲವು ಸ್ಪೋಟಕಗಳನ್ನು ಆರ್ಡರ್ ಮಾಡಿದ್ದ.