ಅಮೆರಿಕ : ಪಾಮ್ ಸ್ಪ್ರಿಂಗ್ಸ್ ನಗರದ ಕ್ಲಿನಿಕ್ವೊಂದರ ಹೊರಗೆ ಬಾಂಬ್ ಸ್ಫೋಟಗೊಂಡು ಓರ್ವ ವ್ಯಕ್ತಿ ಮೃತಪಟ್ಟು, ಕನಿಷ್ಠ ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ. ಎಫ್‌ಬಿಐ ಇದೊಂದು ಭಯೋತ್ಪಾದಕ ದಾಳಿ ಎಂದು ಕರೆದಿದೆ. ಬಾಂಬ್ ಸ್ಫೋಟದಿಂದ ಕ್ಲಿನಿಕ್ ಮತ್ತು ಸಮೀಪದ ಕಟ್ಟಡಗಳಿಗೆ ಹಾನಿಯಾಗಿದೆ. ಇದು ಉದ್ದೇಶಪೂರ್ವಕ ಭಯೋತ್ಪಾದನಾ ಕೃತ್ಯ. ಸ್ಫೋಟದಿಂದ ಕ್ಲಿನಿಕ್ ಬಳಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಮತ್ತು ಇತರ ನಾಲ್ವರು ಗಾಯಗೊಂಡಿದ್ದಾರೆ. ಮೃತರ ಗುರುತು ಪತ್ತೆ ಹಚ್ಚಲಾಗುತ್ತಿದೆ ಎಂದು ಲಾಸ್ ಏಂಜಲೀಸ್ ಎಫ್‌ಬಿಐ ಕಚೇರಿಯ ಮುಖ್ಯಸ್ಥ ಅಕಿಲ್ ಡೇವಿಸ್ ತಿಳಿಸಿದ್ದಾರೆ.
ನಗರದ ಮೇಯರ್ ರಾನ್ ಡಿಹಾರ್ಟೆ ಪ್ರತಿಕ್ರಿಯಿಸಿ, ತನಿಖಾಧಿಕಾರಿಗಳು ಕ್ಲಿನಿಕ್ ಹೊರಗೆ ಬಾಂಬ್ ಸ್ಫೋಟಗೊಂಡಿರುವುದನ್ನು ದೃಢಪಡಿಸಿದ್ದಾರೆ. ಪ್ರತ್ಯಕ್ಷದರ್ಶಿಗಳು ಕ್ಲಿನಿಕ್ ಬಳಿ ವ್ಯಕ್ತಿಯೊಬ್ಬನ ಮೃತದೇಹ ನೋಡಿದ್ದೇವೆ ಎಂದು ಹೇಳಿದ್ದಾರೆ ಎಂದರು. ಸ್ಫೋಟದ ಕೇಂದ್ರಬಿಂದುವಿನಿಂದ ಸ್ವಲ್ಪ ದೂರದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ವಾಹನದ ಸುಟ್ಟ ಅವಶೇಷಗಳು ಬಿದ್ದಿವೆ. ಹತ್ತಿರದ ಹಲವಾರು ಕಟ್ಟಡಗಳ ಛಾವಣಿಗಳು ಹಾನಿಗೊಳಗಾಗಿವೆ, ಇದು ಸ್ಫೋಟದ ತೀವ್ರತೆಯನ್ನು ಸೂಚಿಸುತ್ತದೆ.
ಕ್ಲಿನಿಕ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಬಾಂಬ್ ಸ್ಫೋಟ ಘಟನೆಯಲ್ಲಿ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ ಮತ್ತು ಅದರ ಪ್ರಯೋಗಾಲಕ್ಕೆ ಹಾನಿಯಾಗಿಲ್ಲ. ಎಲ್ಲಾ ಉಪಕರಣಗಳು ಸಂಪೂರ್ಣವಾಗಿ ಸುರಕ್ಷಿತ ಮತ್ತು ಹಾನಿಗೊಳಗಾಗದೆ ಉಳಿದಿದೆ" ಎಂದು ಮಾಹಿತಿ ನೀಡಿದೆ. ಫೆಡರಲ್ ಏಜೆಂಟ್‌ಗಳು ನಿಖರವಾಗಿ ಏನಾಯಿತು ಎಂಬುದನ್ನು ನಿರ್ಧರಿಸಲು ತನಿಖೆ ನಡೆಸುತ್ತಿದ್ದಾರೆ. ಫಲವತ್ತತೆ ಚಿಕಿತ್ಸಾಲಯದ ಮೇಲಿನ ಹಿಂಸಾಚಾರದ ಕೃತ್ಯ ಕ್ಷಮಿಸಲಾಗದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಟಾರ್ನಿ ಜನರಲ್ ಪ್ಯಾಮ್ ಬಾಂಡಿ ಹೇಳಿದರು.