ಪಶ್ಚಿಮ ಬಂಗಾಳ : ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿತರಾಗಿರುವ ಹರಿಯಾಣದ ಜನಪ್ರಿಯ ಮಹಿಳಾ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ, ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಸೇರಿದಂತೆ ವಿವಿಧ ಜನನಿಬಿಡ ಹಾಗೂ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿದ್ದಷ್ಟೇ ಅಲ್ಲದೇ ವ್ಲಾಗ್ ಕೂಡ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಹರಿಯಾಣದ ತನಿಖಾಧಿಕಾರಿಗಳು, ಪಶ್ಚಿಮ ಬಂಗಾಳದಲ್ಲಿ ಆರೋಪಿ ಜ್ಯೋತಿ ಭೇಟಿ ನೀಡಿದ ಸ್ಥಳಗಳ ಬಗ್ಗೆ ರಾಜ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭೇಟಿ ನೀಡಿದಾಗ ಕೆಲವು ವ್ಲಾಗ್‌ಗಳನ್ನು ಚಿತ್ರೀಕರಣ ಮಾಡಿರುವ ಜ್ಯೋತಿ, ಅವುಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಅವುಗಳ ಜಾಡು ಹಿಡಿದ ತನಿಖಾಧಿಕಾರಿಗಳು ಇದೀಗ ಕೋಲ್ಕತ್ತಾಕ್ಕೂ ಬಂದಿದ್ದಾರೆ. "ಟ್ರಾವೆಲ್ ವಿತ್-ಜೋ" ಎಂಬ ಟ್ರಾವೆಲ್ ವ್ಲಾಗರ್ ನಡೆಸುತ್ತಿದ್ದ ಜ್ಯೋತಿ, ಪ್ರವಾಸದ ಸಮಯದಲ್ಲಿ ಸೀಲ್ಡಾ, ಬ್ಯಾರಕ್‌ಪೋರ್, ಸಿಲಿಗುರಿ, ಹೌರಾ ಮತ್ತು ಡಮ್‌ಡಮ್‌ನಂತಹ ಜನನಿಬಿಡ ನಿಲ್ದಾಣ ಅಷ್ಟೇ ಅಲ್ಲದೇ ಗಡಿ ಪ್ರದೇಶದಂತಹ ಸೂಕ್ಷ್ಮ ಪ್ರದೇಶಗಳಿಗೂ ಭೇಟಿ ನೀಡಿದ್ದು ಇದೀಗ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಮಹಿಳಾ ಯೂಟ್ಯೂಬರ್, ಕೋಲ್ಕತ್ತಾ ಸೇರಿ ಪಕ್ಕದ ಜಿಲ್ಲೆಗಳಿಗೆ ಭೇಟಿ ನೀಡಿರುವ ಬಗ್ಗೆ ನಮಗೆ ಮಾಹಿತಿ ಇದೆ. ಜಿಲ್ಲಾ ಪೊಲೀಸ್ ಗುಪ್ತಚರದೊಂದಿಗೆ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಾವು ಇತರ ರಾಜ್ಯಗಳ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಕೋಲ್ಕತ್ತಾ ಪೊಲೀಸರ ವಿಶೇಷ ಕಾರ್ಯಪಡೆಯ ಉಸ್ತುವಾರಿ ವಹಿಸಿರುವ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆರೋಪಿ ಜ್ಯೋತಿ ಕೋಲ್ಕತ್ತಾಗೆ ಭೇಟಿ ನೀಡಿದ್ದ ವೇಳೆ ವಿವಿಧ ಜನನಿಬಿಡ ಪ್ರದೇಶ ಮತ್ತು ನಗರದ ಕೆಲವು ಪ್ರಸಿದ್ಧ ಸ್ಥಳಗಳ ವಿಡಿಯೋಗಳನ್ನು ಚಿತ್ರೀಕರಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಸೀಲ್ಡಾ ನಿಲ್ದಾಣದಿಂದ ರೈಲು ಪ್ರಯಾಣದ ಒಂದು ವಿಡಿಯೋ, ಬರಾಕ್‌ಪೋರ್‌ನಲ್ಲಿರುವ ಪ್ರಸಿದ್ಧ ಬಿರಿಯಾನಿ ಅಂಗಡಿಗೆ ಭೇಟಿ ನೀಡಿದ ಮತ್ತೊಂದು ವಿಡಿಯೋ ಚಿತ್ರೀಕರಿಸಿದ್ದಾಳೆ.
ಸಿಲಿಗುರಿಗೆ ಆಗಮಿಸಿದ ವಿಡಿಯೋ ಸಹ ಆಕೆಯ ಯೂಟ್ಯೂಬ್ ಚಾನಲ್ನಲ್ಲಿದೆ. ಹೂಗ್ಲಿ ಜಿಲ್ಲೆಯ ಶಿಯೋರಾಫುಲಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿಯೂ ಆಕೆ ಭಾಗವಹಿಸಿರುವ ಮಾಹಿತಿ ಲಭ್ಯವಾಗಿದೆ. ಆ ಕುಟುಂಬದೊಂದಿಗೆ ಅವರ ಸಂಪರ್ಕ ಮತ್ತು ಆ ಮದುವೆಗೆ ಆಕೆಯನ್ನು ಏಕೆ ಆಹ್ವಾನಿಸಲಾಯಿತು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಯುತ್ತಿದೆ.
ಭೂತಾನ್‌ಗೆ ಹೋಗಲು ದೆಹಲಿಯಿಂದ ವಿಮಾನದ ಮೂಲಕ ಬಾಗ್ಡೋಗ್ರಾ ತಲುಪಿರುವ, ಆರೋಪಿ ಜ್ಯೋತಿ ಸಿಲಿಗುರಿಯ ಹೋಟೆಲ್‌ನಲ್ಲಿ ತಂಗಲು ಆಯ್ಕೆ ಮಾಡಿಕೊಂಡಿದ್ದಾಗಿ ಆಕೆಯೇ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಮೂರು ಬಾರಿ ರೈಲಿನಲ್ಲಿ ಕೋಲ್ಕತ್ತಾಗೆ ಬಂದಿರುವ ಜ್ಯೋತಿ, ಕೊನೆಯ ಮೂರು ತಿಂಗಳ ಹಿಂದೆ ಇಲ್ಲಿಗೆ ಆಗಮಿಸಿದ್ದಳು. ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗಿ ತನಿಖೆ ವೇಳೆ ಆಕೆಯೇ ಹೇಳಿಕೊಂಡಿದ್ದಾಳೆ. ಹಾಗಾಗಿ ಜ್ಯೋತಿ ಪಶ್ಚಿಮ ಬಂಗಾಳಕ್ಕೆ ಬಂದಿದ್ದು ಕೇವಲ ಸುತ್ತಾಡಲು ಮಾತ್ರವಾ ಅಥವಾ ಮಾಹಿತಿಯನ್ನು ಕಳ್ಳಸಾಗಣೆ ಮಾಡಲು ಬಂದಿದ್ದಾ ಎಂಬುದೇ ನಿಗೂಢ. ಈ ನಿಟ್ಟಿನಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.