ಶ್ರೀಹರಿಕೋಟಾ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇಂದು ಮುಂಜಾನೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ EOS-09 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಆದರೆ ಬಳಿಕ ಈ ಮಿಷನ್ನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. EOS-09 ಉಪಗ್ರಹವನ್ನು ಹೊತ್ತ PSLV-C61 ರಾಕೆಟ್ ಹಿನ್ನಡೆ ಅನುಭವಿಸಿತು. ಉಡಾವಣೆಯ ಮೂರನೇ ಹಂತದಲ್ಲಿ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಯಶಸ್ವಿಗೊಂಡಿಲ್ಲ ಎಂದು ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಹೇಳಿದರು.
ಕಾರ್ಯಾಚರಣೆಯ ಮೂರನೇ ಹಂತದ ಬಗ್ಗೆ ನಾವು ಅವಲೋಕನ ಮಾಡುತ್ತಿದ್ದೇವೆ. ಆದರೆ, ಈ ಮಿಷನ್ನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ವಿಶ್ಲೇಷಣೆಯ ಬಳಿಕ ಮುಂದಿನ ಮಾಹಿತಿ ನೀಡುತ್ತೇವೆ ಎಂದು ನಾರಾಯಣನ್ ಅವರು ಮಾಧ್ಯಮಗಳಿಗೆ ತಿಳಿಸಿದರು. ಇದು ಇಸ್ರೋದ 101ನೇ ಉಡಾವಣೆಯಾಗಿದ್ದು, ಬೆಳಗ್ಗೆ 5:59ಕ್ಕೆ ಉಡ್ಡಯನ ಮಾಡಲಾಗಿತ್ತು. ಇದು PSLVಯ 63ನೇ ಮತ್ತು PSLV-XLನ 27ನೇ ಕಾರ್ಯಾಚರಣೆಯಾಗಿದೆ.
ಮಿಷನ್ ಯಶಸ್ಸಿಗೆ ಪ್ರಾರ್ಥಿಸಿ ಶುಕ್ರವಾರ ಇಸ್ರೋ ಅಧ್ಯಕ್ಷರು ತಿರುಪತಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. 'ಪಿಎಸ್‌ಎಲ್‌ವಿ-ಸಿ61ರಿಂದ ಈ 101ನೇ ಮಿಷನ್ ಇಸ್ರೋಗೆ ಒಂದು ಪ್ರಮುಖ ಮೈಲಿಗಲ್ಲಾಗಲಿದೆ. ಇದು ಭಾರತದ ಎಲ್ಲಾ ಹವಾಮಾನ ಭೂ ವೀಕ್ಷಣಾ ಸಾಮರ್ಥ್ಯಗಳು ಮತ್ತು ಬಾಹ್ಯಾಕಾಶ ಆಧಾರಿತ ಪರಿಹಾರಗಳಿಗೆ ದೇಶದ ಬದ್ಧತೆಯನ್ನು ಬಲಪಡಿಸಲಿದೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದರು.