image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹೈದರಾಬಾದ್‌ನ ಚಾರ್​ಮಿನಾರ್ ಬಳಿ ಭಾರಿ ಬೆಂಕಿ ಅವಘಡ

ಹೈದರಾಬಾದ್‌ನ ಚಾರ್​ಮಿನಾರ್ ಬಳಿ ಭಾರಿ ಬೆಂಕಿ ಅವಘಡ

ತೆಲಂಗಾಣ : ಹೈದರಾಬಾದ್‌ನ ಚಾರ್​ಮಿನಾರ್ ಬಳಿಯ ಗುಲ್ಜಾರ್ ಹೌಸ್‌ ಸಮೀಪದ ಕಟ್ಟಡವೊಂದರಲ್ಲಿ ಭಾನುವಾರ ಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ನಿಯಂತ್ರಿಸಲು ಸ್ಥಳಕ್ಕೆ ಒಟ್ಟು 11 ಅಗ್ನಿಶಾಮಕ ವಾಹನಗಳು ದೌಡಾಯಿಸಿ, ಕಾರ್ಯಾಚರಣೆ ನಡೆಸಿದ್ದಾರೆ. ಸಿಬ್ಬಂದಿಯು ಒಬ್ಬ ಮಹಿಳೆ ಸೇರಿದಂತೆ ಹಲವರನ್ನು ರಕ್ಷಿಸಿದ್ದಾರೆ. ಆದರೆ 17 ಜನರು ಬೆಂಕಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಉಸ್ಮಾನಿಯಾ, ಹೈದರ್‌ಗುಡ ಮತ್ತು ಡಿಆರ್‌ಡಿಒ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ಬೆಂಕಿ ನಂದಿಸಲಾಗಿದೆ.

ಬೆಂಕಿ ಅವಘಡಕ್ಕೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂಬ ಶಂಕೆ ಇದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಕಿ ಅವಘಡದಿಂದ ಸ್ಥಳೀಯರು ಕೆಲಕಾಲ ತೀವ್ರ ಆತಂಕಗೊಂಡಿದ್ದರು. ಘಟನೆಯ ಬಗ್ಗೆ ತೆಲಂಗಾಣದ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದು, ಕಟ್ಟಡದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಮತ್ತು ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡುವಂತೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಸಿಎಂಒ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪರಿಹಾರ ಘೋಷಣೆ ಮಾಡಿದ್ದಾರೆ. ''ತೆಲಂಗಾಣದ ಹೈದರಾಬಾದ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಹಲವರ ಜೀವಹಾನಿಯಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಗುಣಮುಖರಾಗಲಿ. ಮೃತರ ಸಂಬಂಧಿಕರಿಗೆ ಪಿಎಂಎನ್‌ಆರ್‌ಎಫ್‌ನಿಂದ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು'' ಎಂದು ಪ್ರಧಾನಿಯವರ ಎಕ್ಸ್​ ಪೋಸ್ಟ್​​ನಲ್ಲಿ ತಿಳಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ನಂತರ, ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ, ''ಅಗ್ನಿ ಅವಘಡದಲ್ಲಿ ಹಲವರು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಅಂಕಿ-ಅಂಶವನ್ನು ಅವರೇ ದೃಢಪಡಿಸಬೇಕಾಗಿದೆ'' ಎಂದು ಹೇಳಿದರು.

Category
ಕರಾವಳಿ ತರಂಗಿಣಿ