ನವದೆಹಲಿ: ಭಯೋತ್ಪಾದನಾ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾದ (ISIS) ಸ್ಲೀಪರ್ ಸೆಲ್‌ಗಳಾಗಿ ಕೆಲಸ ಮಾಡುತ್ತಿದ್ದ ಮತ್ತಿಬ್ಬರನ್ನು ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಮುಂಬೈ ವಿಮಾನ ನಿಲ್ದಾಣದಲ್ಲಿ ಶನಿವಾರ ಬಂಧಿಸಿದೆ. ಅಬ್ದುಲ್ಲಾ ಫೈಯಾಜ್ ಶೇಖ್ ಅಲಿಯಾಸ್ ಡೈಪರ್‌ವಾಲಾ ಮತ್ತು ತಲ್ಹಾ ಖಾನ್ ಬಂಧಿತ ಸ್ಲೀಪರ್ ಸೆಲ್ಗಳು. ಇವರಿಬ್ಬರು 2023 ರ ಪುಣೆ ಐಇಡಿ ಸ್ಫೋಟ ಪ್ರಕರಣದ ಆರೋಪಿಗಳಾಗಿದ್ದರು. ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದರು. ಇದೀಗ, ಎನ್‌ಐಎ ಜಾಲಕ್ಕೆ ಬಿದ್ದಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಧಿಕಾರಿಗಳು, ISIS ಭಯೋತ್ಪಾದನಾ ಸಂಘಟನೆಯ ಇಬ್ಬರು ಸ್ಲೀಪರ್ ಸೆಲ್ಗಳನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇವರು ಜಕಾರ್ತಾದಿಂದ ಭಾರತಕ್ಕೆ ಬಂದಿದ್ದರು. ನಿಖರ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿ ಇಬ್ಬರನ್ನೂ ಶುಕ್ರವಾರ ರಾತ್ರಿ ಬಂಧಿಸಲಾಯಿತು ಎಂದಿದ್ದಾರೆ.
ಇಬ್ಬರು ಆರೋಪಿಗಳು 2023 ರ ಪುಣೆ ಸ್ಫೋಟದ ಆರೋಪಿಗಳಾಗಿದ್ದರು. ಕಳೆದ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದರು. ಮುಂಬೈನ NIA ವಿಶೇಷ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಸಹ ಹೊರಡಿಸಿದೆ. ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 3 ಲಕ್ಷ ರೂಪಾಯಿ ನಗದು ಬಹುಮಾನ ಕೂಡ ಘೋಷಿಸಲಾಗಿತ್ತು ಎಂದು ಎನ್‌ಐಎ ತಿಳಿಸಿದೆ.
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾದ ಪುಣೆಯ ಎಂಟು ಸ್ಪೀಪರ್ ಸೆಲ್ ಸದಸ್ಯರನ್ನು ಈಗಾಗಲೇ ಬಂಧಿಸಲಾಗಿದೆ. ಈ ಆರೋಪಿಗಳೊಂದಿಗೆ ಈ ಇಬ್ಬರು ಸಂಬಂಧ ಹೊಂದಿದ್ದಾರೆ. ಕ್ರಿಮಿನಲ್ ಪಿತೂರಿಯಲ್ಲಿ ಇವರೂ ಭಾಗಿದಾರರಾಗಿದ್ದಾರೆ. ಹಿಂಸಾಚಾರ ಮತ್ತು ಭಯೋತ್ಪಾದನೆಯ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಐಸಿಸ್ನ ಕಾರ್ಯಸೂಚಿಯನ್ನು ಅನುಸರಿಸುತ್ತಿದ್ದರು. ಭಾರತದಲ್ಲಿ ಶಾಂತಿ ಮತ್ತು ಕೋಮು ಸಾಮರಸ್ಯಕ್ಕೆ ಭಂಗ ತರುವ ಗುರಿಯೊಂದಿಗೆ ಅವರು ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದರು ಎಂದು ಎನ್‌ಐಎ ಹೇಳಿದೆ.
ಮೊಹಮ್ಮದ್ ಇಮ್ರಾನ್ ಖಾನ್, ಮೊಹಮ್ಮದ್ ಯೂನಸ್ ಸಾಕಿ, ಅಬ್ದುಲ್ ಖಾದಿರ್ ಪಠಾಣ್, ಸಿಮಾಬ್ ನಾಸಿರುದ್ದೀನ್ ಕಾಜಿ, ಜುಲ್ಫಿಕರ್ ಅಲಿ ಬರೋಡಾವಾಲಾ, ಶಮಿಲ್ ನಾಚನ್, ಅಕಿಫ್ ನಾಚನ್ ಮತ್ತು ಶಹನವಾಜ್ ಅಲಂ ಬಂಧನದಲ್ಲಿರುವ ಐಎಸ್ಐಎಸ್ ಸ್ಲಿಪರ್ ಸೆಲ್ ಸದಸ್ಯರಾಗಿದ್ದಾರೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.