ನವದೆಹಲಿ: ಭಯೋತ್ಪಾದನೆಯ ವಿರುದ್ಧ ಮಹತ್ವದ ರಾಜತಾಂತ್ರಿಕ ಅಭಿಯಾನ ಆರಂಭಿಸಿರುವ ಕೇಂದ್ರ ಸರ್ಕಾರ, ಪಾಕಿಸ್ತಾನದ ವಿರುದ್ಧ ತಮ್ಮ ನಿಲುವು ಪ್ರಸ್ತುತಪಡಿಸುವ ನಿಟ್ಟಿನಲ್ಲಿ ಮುಂದಿನ ವಾರದಿಂದ ವಿವಿಧ ದೇಶಗಳಿಗೆ ಹಲವು ಸರ್ವಪಕ್ಷ ನಿಯೋಗಗಳನ್ನು ಕಳುಹಿಸಲಿದೆ. ಈ ಮೂಲಕ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ವಿಶ್ವ ವೇದಿಕೆಯಲ್ಲಿ ಬಹಿರಂಗಪಡಿಸಲಿದೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರು ಸೇರಿದಂತೆ 26 ಜನರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ, ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಇದೀಗ ಈ ರಾಜತಾಂತ್ರಿಕ ಅಭಿಯಾನದ ಮೂಲಕ ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧದ ನಮ್ಮ ನಿಲುವನ್ನು ವಿದೇಶಗಳಲ್ಲಿ ಪ್ರಸ್ತುತಪಡಿಸುವ ಗುರಿಯನ್ನು ಹೊಂದಿದೆ.
ಆಡಳಿತ ಮತ್ತು ವಿರೋಧ ಪಕ್ಷದ ವಿವಿಧ ಪಕ್ಷಗಳ ಸಂಸದರು ಸೇರಿದಂತೆ ಹಿರಿಯ ನಾಯಕರಿಗೆ ಈ ಅಭಿಯಾನದಲ್ಲಿ ಭಾಗವಹಿಸುವಂತೆ ಸರ್ಕಾರವು ಕೋರಿದೆ. ಕೆಲವು ಪಕ್ಷಗಳು ತಮ್ಮ ಸದಸ್ಯರು ಈ ಅಭಿಯಾನದಲ್ಲಿ ಉಪಸ್ಥಿತರಿರುವಂತೆ ಅನುಮತಿ ನೀಡಿವೆ. ಕೆಲವು ಮಾಜಿ ಸಚಿವರು, ವಿವಿಧ ಪಕ್ಷಗಳ ಸಂಸದರ ನಿಯೋಗವನ್ನು ಮುನ್ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತಿಯೊಂದು ನಿಯೋಗವು ಏಳರಿಂದ ಎಂಟು ಸದಸ್ಯರನ್ನು ಹೊಂದಿರುವ ಸಾಧ್ಯತೆಯಿದ್ದು, ಇವರು ನಾಲ್ಕರಿಂದ ಐದು ದೇಶಗಳಿಗೆ ಭೇಟಿ ನೀಡಬಹುದು. ನಿಯೋಗಗಳ ನಿಖರ ಸಂಖ್ಯೆ ಅಥವಾ ಅವರ ಸದಸ್ಯರ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಕೆಲವು ನಾಯಕರು 30 ಕ್ಕೂ ಹೆಚ್ಚು ಸಂಸದರನ್ನು ಈ ಅಭಿಯಾನದಲ್ಲಿ ಸೇರಿಸಿಕೊಳ್ಳಬಹುದು ಎಂದು ಮೂಲಗಳು ಹೇಳಿವೆ. ಈ ನಿಯೋಗಗಳು 10 ದಿನಗಳ ಅವಧಿಯಲ್ಲಿ ವಿವಿಧ ದೇಶಗಳಿಗೆ ಭೇಟಿ ನೀಡಲಿವೆ. ಸರ್ಕಾರ ನಿಗದಿಪಡಿಸಿದಂತೆ ಸಂಸದರು ವಿವಿಧ ದೇಶಗಳಿಗೆ ಭೇಟಿ ನೀಡಲಿದ್ದಾರೆ.
ಸಂಸದರು ಹೊರಡುವ ಮೊದಲು ವಿದೇಶಾಂಗ ಸಚಿವಾಲಯ (MEA) ಮಾಹಿತಿ ನೀಡಲಿದೆ. ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎನ್‌ಸಿಪಿ (ಎಸ್‌ಪಿ), ಜೆಡಿಯು, ಬಿಜೆಡಿ, ಶಿವಸೇನೆ (ಯುಬಿಟಿ), ಸಿಪಿಐ (ಎಂ) ಮತ್ತು ಇತರ ಕೆಲವು ಪಕ್ಷಗಳ ಸಂಸದರು ನಿಯೋಗದ ಭಾಗವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿಯೋಗದಲ್ಲಿ ಕೇಂದ್ರದ ಮಾಜಿ ಸಚಿವ ಅನುರಾಗ್ ಠಾಕೂರ್ ಮತ್ತು ಒಡಿಶಾದ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಮತ್ತು ರಾಜೀವ್ ಪ್ರತಾಪ್ ರೂಡಿ, ಬಿಜೆಪಿ ಸಂಸದ ಸಮಿಕ್ ಭಟ್ಟಾಚಾರ್ಯ ಮತ್ತು ಬ್ರಿಜ್ ಲಾಲ್ ಕೂಡ ನಿಯೋಗದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರಾಜತಾಂತ್ರಿಕ ಅಭಿಯಾನದ ಕುರಿತು ಸರ್ಕಾರವು ಕಾಂಗ್ರೆಸ್‌ನ ಕನಿಷ್ಠ ನಾಲ್ವರು ಸಂಸದರನ್ನು ಮತ್ತು ಇತರ ಪಕ್ಷಗಳ ಸದಸ್ಯರನ್ನು ಸಂಪರ್ಕಿಸಿದೆ. ಇದರಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್, ಮನೀಶ್ ತಿವಾರಿ, ಸಲ್ಮಾನ್ ಖುರ್ಷಿದ್ ಮತ್ತು ಅಮರ್ ಸಿಂಗ್ ನಿಯೋಗದ ಭಾಗವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.