image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಪರೇಷನ್ ಸಿಂಧೂರ ಟ್ರೇಲರ್ ಅಷ್ಟೇ, ಸಮಯ ಬಂದಾಗ ಫುಲ್ ಸಿನಿಮಾ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಆಪರೇಷನ್ ಸಿಂಧೂರ ಟ್ರೇಲರ್ ಅಷ್ಟೇ, ಸಮಯ ಬಂದಾಗ ಫುಲ್ ಸಿನಿಮಾ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ನವದೆಹಲಿ: ಆಪರೇಷನ್ ಸಿಂಧೂರ ವೇಳೆ ಭಾರತೀಯ ವಾಯುಪಡೆ ಮತ್ತು ಸಶಸ್ತ್ರ ಪಡೆಗಳ ಅಸಾಧಾರಣ ಪ್ರದರ್ಶನವನ್ನು ಶ್ಲಾಘಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇದು ಭಾರತದ ಮಿಲಿಟರಿ ಶಕ್ತಿ ಮತ್ತು ಸನ್ನದ್ಧತೆಗೆ ಒಂದು ಅದ್ಭುತ ನಿದರ್ಶನವಾಗಿದೆ ಎಂದರು.

ಶ್ರೀನಗರದಲ್ಲಿ ಭದ್ರತಾ ಪಡೆಯ ಸಿಬ್ಬಂದಿಯನ್ನು ಭೇಟಿಯಾಗಿದ್ದ ರಕ್ಷಣಾ ಸಚಿವರು ಇಂದು ಶುಕ್ರವಾರ ಗುಜರಾತ್‌ನ ಭುಜ್ ವಾಯು ನೆಲೆಗೆ ಭೇಟಿ ನೀಡಿ, "ವಾಯುಪಡೆಯ ವೀರ ಯೋಧರ" ಜೊತೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ರಕ್ಷಣಾ ಸಚಿವರು, "ನಮ್ಮ ವಾಯುಪಡೆಯು ತನ್ನ ಶೌರ್ಯ, ಧೈರ್ಯ ಮತ್ತು ವೈಭವದಿಂದ ಹೊಸ ಎತ್ತರ ತಲುಪಿದೆ. ಭಯೋತ್ಪಾದನೆಯ ವಿರುದ್ಧದ ಆಪರೇಷನ್ ಸಿಂಧೂರ ಅಭಿಯಾನವನ್ನು ವಾಯುಪಡೆ ಪರಿಣಾಮಕಾರಿಯಾಗಿ ಮುನ್ನಡೆಸಿದೆ" ಎಂದು ಹೊಗಳಿದರು.

ಆಪರೇಷನ್ ಸಿಂಧೂರದಲ್ಲಿ ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸುವುದಷ್ಟೇ ಅಲ್ಲ, ನಾಶ ಮಾಡುವುದರಲ್ಲೂ ಭಾರತೀಯ ಸಶಸ್ತ್ರ ಪಡೆಗಳು ಯಶಸ್ವಿಯಾಗಿವೆ. ಪಾಕ್​​ನ ಹಲವು ವಾಯು ನೆಲೆಗಳು ನಾಶವಾಗಿವೆ. ಪಾಕಿಸ್ತಾನದಲ್ಲಿನ 9 ಉಗ್ರರ ನೆಲೆಗಳನ್ನು ಭಾರತ ಧ್ವಂಸಗೊಳಿಸಿದ್ದನ್ನು ಇಡೀ ವಿಶ್ವವೇ ನೋಡಿದೆ. ಈ ಮೂಲಕ ನವ ಭಾರತದ ಸಂದೇಶವನ್ನು ಜಗತ್ತಿಗೆ ರವಾನಿಸಿದ್ದೀರಿ ಎಂದು ಸೇನಾ ಸಿಬ್ಬಂದಿಯನ್ನು ಉದ್ದೇಶಿಸಿ ರಾಜನಾಥ್ ಸಿಂಗ್ ಮಾತನಾಡಿದರು. ಪಾಕಿಸ್ತಾನಕ್ಕೆ ಐಎಂಎಫ್ ಹಣಕಾಸು ನೆರವು ನೀಡುವುದನ್ನು ಮರು ಪರಿಶೀಲಿಸಬೇಕು. ಸದ್ಯದ ಮಟ್ಟಿಗೆ ಪಾಕಿಸ್ತಾನಕ್ಕೆ ನೀಡುವ ಹಣಕಾಸು ಸೇರಿ ಯಾವುದೇ ನೆರವು ಕೂಡ ಭಯೋತ್ಪಾದನೆಗೆ ನೀಡಿದಂತಾಗಲಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ನಾವು ಪಾಕಿಸ್ತಾನಕ್ಕೆ ಸಮಯ ನೀಡಿದ್ದೇವೆ. ಅವರ ನಡವಳಿಕೆ ಸುಧಾರಿಸಿದರೆ ಸರಿ, ಇಲ್ಲದಿದ್ದರೆ, ಅದಕ್ಕೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ. ಸದ್ಯ ಏನೇ ನಡೆದರೂ ಅದು ಕೇವಲ ಟ್ರೇಲರ್ ಮಾತ್ರ. ಸರಿಯಾದ ಸಮಯ ಬಂದಾಗ, ನಾವು ಪೂರ್ತಿ ಸಿನಿಮಾವನ್ನು ಜಗತ್ತಿಗೆ ತೋರಿಸುತ್ತೇವೆ ಎಂದು ರಕ್ಷಣಾ ಸಚಿವರು ಎಚ್ಚರಿಕೆ ನೀಡಿದ್ದಾರೆ.

1965 ಮತ್ತು 1971ರಲ್ಲಿ ಪಾಕ್ ವಿರುದ್ಧದ ನಮ್ಮ ಗೆಲುವಿಗೆ ಭುಜ್ ಸಾಕ್ಷಿಯಾಗಿತ್ತು. ಈಗ ಮತ್ತೆ ಪಾಕ್ ವಿರುದ್ಧದ ಜಯಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಇಲ್ಲಿ ಬರಲು ನನಗೆ ಹೆಮ್ಮೆ ಎನಿಸುತ್ತಿದೆ ಎಂದು ರಾಜ್​ನಾಥ್ ಸಿಂಗ್ ತಿಳಿಸಿದರು  ಈ ವೇಳೆ ವಾಯುಪಡೆಯ ಚೀಫ್ ಏರ್ ಮಾರ್ಷಲ್ ಎಪಿ ಸಿಂಗ್ ಅವರು ಕೂಡ ರಕ್ಷಣಾ ಸಚಿವರಿಗೆ ಸಾಥ್ ನೀಡಿದರು. ಇತ್ತೀಚಿನ ಭಾರತ, ಪಾಕಿಸ್ತಾನ ಸಶಸ್ತ್ರ ಸಂಘರ್ಷದ ಹಿನ್ನೆಲೆ ಸಶಸ್ತ್ರ ಪಡೆಗಳ ಕಾಯಾರ್ಚರಣೆಯ ಸಿದ್ಧತೆಯ ಕುರಿತು ಚೀಫ್ ಏರ್ ಮಾರ್ಷಲ್ ಇದೇ ವೇಳೆ ಪರಿಶೀಲಿಸಿದರು.

Category
ಕರಾವಳಿ ತರಂಗಿಣಿ