image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಕ್ಫ್ (ತಿದ್ದುಪಡಿ) ಕಾಯ್ದೆ, 2025 ರ ಸಿಂಧುತ್ವದ ಕುರಿತು ಮೇ 19 ರೊಳಗೆ ಲಿಖಿತ ಟಿಪ್ಪಣಿಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ

ವಕ್ಫ್ (ತಿದ್ದುಪಡಿ) ಕಾಯ್ದೆ, 2025 ರ ಸಿಂಧುತ್ವದ ಕುರಿತು ಮೇ 19 ರೊಳಗೆ ಲಿಖಿತ ಟಿಪ್ಪಣಿಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯ್ದೆ 2025ರ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳ ಕುರಿತು ಮಧ್ಯಂತರ ಪರಿಹಾರವನ್ನು ಪರಿಗಣಿಸುವ ವಿಷಯದ ಕುರಿತು ವಾದಗಳನ್ನು ಮೇ 20 ರಂದು ಆಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಹಿಂದಿನ 1995 ರ ವಕ್ಫ್ ಕಾನೂನಿನ ನಿಬಂಧನೆಗಳನ್ನು ತಡೆ ಹಿಡಿಯುವ ಯಾವುದೇ ಅರ್ಜಿಯನ್ನು ಮುಂದಿನ ವಿಚಾರಣೆಯ ದಿನಾಂಕದಂದು ಪರಿಗಣಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು ಕಾಯ್ದೆಯ ನಿಬಂಧನೆಗಳನ್ನು ತಡೆಹಿಡಿದ ಮಧ್ಯಂತರ ಆದೇಶದ ಪರವಾಗಿ ಮತ್ತು ವಿರುದ್ಧವಾಗಿ ಇಡೀ ದಿನ ವಾದಗಳನ್ನು ಆಲಿಸುವುದಾಗಿ ಹೇಳಿದೆ.

ಕಾನೂನಿನ ಸಿಂಧುತ್ವ ಪ್ರಶ್ನಿಸುವ ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಕೇಂದ್ರವನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಮೇ 19 ರೊಳಗೆ ತಮ್ಮ ಲಿಖಿತ ಟಿಪ್ಪಣಿಗಳನ್ನು ಸಲ್ಲಿಸುವಂತೆ ಪೀಠವು ಕೇಳಿತು. ವಿಚಾರಣೆಯನ್ನು ಮುಂದಿನ ವಾರಕ್ಕೆ ನಿಗದಿಪಡಿಸಬಹುದು. ಇದು ನ್ಯಾಯಾಧೀಶರಿಗೆ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಲು ಸಾಕಷ್ಟು ಸಮಯವನ್ನು ಒದಗಿಸುತ್ತದೆ ಎಂದು ಇಬ್ಬರೂ ಹಿರಿಯ ವಕೀಲರು ಸೂಚಿಸಿದರು. ವಿಚಾರಣೆಯ ಸಮಯದಲ್ಲಿ ವಕೀಲ ವಿಷ್ಣು ಶಂಕರ್ ಜೈನ್, ವಕ್ಫ್ ಕಾಯ್ದೆ 1995ರ ನಿಬಂಧನೆಗಳನ್ನು ತಾವು ಪ್ರಶ್ನಿಸಿರುವುದಾಗಿ ಪೀಠದ ಮುಂದೆ ಮನವಿ ಸಲ್ಲಿಸಿದರು.

ಹೊಸ ಅರ್ಜಿಯಲ್ಲಿ ತಮ್ಮ ಕಕ್ಷಿದಾರರು ವಕ್ಫ್ ತಿದ್ದುಪಡಿ ಕಾಯ್ದೆ 2025ರ ವಿವಿಧ ನಿಬಂಧನೆಗಳನ್ನು ಪ್ರಶ್ನಿಸಿದ್ದಾರೆ ಮತ್ತು ಅವರ ಕಕ್ಷಿದಾರರು 2025 ರಲ್ಲಿ ತಿದ್ದುಪಡಿ ಮಾಡಲಾದ ವಕ್ಫ್ ಕಾಯ್ದೆ 1995ರ ಕೆಲವು ನಿಬಂಧನೆಗಳಿಂದ ನೊಂದಿದ್ದಾರೆ. ಹೊಸ ಸಲ್ಲಿಕೆಗಳನ್ನು ಮಾಡಲು 30 ನಿಮಿಷಗಳ ಕಾಲಾವಕಾಶ ನೀಡುವಂತೆ ಪೀಠವನ್ನು ಕೋರಲಾಗಿದೆ ಎಂದು ಜೈನ್ ಹೇಳಿದರು.

ನ್ಯಾಯಪೀಠವು ಜೈನ್ ಅವರನ್ನು ನಿಮ್ಮ ದೂರು ಏನು ಎಂದು ಪ್ರಶ್ನಿಸಿತು?, ಇದಕ್ಕೆ ಉತ್ತರಿಸಿದ ಅವರು, ಸಂವಿಧಾನ ಬಾಹಿರವಾದ ವಕ್ಫ್ ನ್ಯಾಯಮಂಡಳಿ ಇನ್ನೂ ಇದೆ. ಕಠಿಣವಾದ ಹಲವಾರು ಇತರ ವಿಭಾಗಗಳಿವೆ ಮತ್ತು ಅವು ಇನ್ನೂ ಅಸ್ತಿತ್ವದಲ್ಲಿವೆ ಎಂದರು. ಮತ್ತೆ ಪ್ರಶ್ನಿಸಿದ ನ್ಯಾಯಮೂರ್ತಿ ಗವಾಯಿ, "ಅವು ಎಂದಿನಿಂದ ಅಸ್ತಿತ್ವದಲ್ಲಿವೆ? ಎಂದರು. 1995 ರಿಂದ ಮತ್ತು 2025 ರಲ್ಲಿಯೂ ಸಹ ಅವುಗಳು ಅಸ್ಥಿತ್ವದಲ್ಲಿವೆ ಎಂದು ಜೈನ್​ ಉತ್ತರಿಸಿದರು. ನ್ಯಾಯಮೂರ್ತಿ ಗವಾಯಿ ಅವು 1995 ರಿಂದ ಅಸ್ತಿತ್ವದಲ್ಲಿದ್ದರೆ ಇಲ್ಲಿವರೆಗೂ ಯಾಕೆ ಪ್ರಶ್ನಿಸಿಲ್ಲ ಎಂದು ಕೇಳಿದರು.

ಚೀಫ್​ ಜಸ್ಟೀಸ್​ ಅವರ ಪ್ರಶ್ನೆಗೆ ಉತ್ತರಿಸಿದ ವಕೀಲರು, 1995 ರ ಕಾಯ್ದೆಯನ್ನು ಮೊದಲೇ ಪ್ರಶ್ನಿಸಲಾಗಿತ್ತು ಮತ್ತು ಸುಪ್ರೀಂ ಕೋರ್ಟ್ ಅವರಿಗೆ ಹೈಕೋರ್ಟ್‌ಗೆ ಹೋಗಲು ಹೇಳಿತ್ತು. ನಾವು ಈ ಸಂಬಂಧ ಸುಮಾರು 140 ಅರ್ಜಿಗಳನ್ನು ಸಲ್ಲಿಸಿದ್ದೇವೆ. ಅವು ವಿವಿಧ ನ್ಯಾಯಾಲಯಗಳಲ್ಲಿ ಪೆಂಡಿಂಗ್ ಇವೆ ಎಂದು ಹೇಳಿದರು. ಮೇ 20 ರಂದು ನ್ಯಾಯಾಲಯವು ಈ ವಿಷಯವನ್ನು ಕೈಗೆತ್ತಿಕೊಳ್ಳುವಾಗ ಹಿಂದಿನ 1995ರ ವಕ್ಫ್ ಕಾನೂನಿನ ನಿಬಂಧನೆಗಳನ್ನು ತಡೆ ಹಿಡಿಯುವ ಯಾವುದೇ ಮನವಿಯನ್ನು ಪರಿಗಣಿಸುವುದಿಲ್ಲ ಎಂದು ಪೀಠ ಹೇಳಿತು.

Category
ಕರಾವಳಿ ತರಂಗಿಣಿ