ನವದೆಹಲಿ: 21 ದಿನ ಪಾಕಿಸ್ತಾನ ರೇಂಜರ್ಸ್ (ಪಾಕಿಸ್ತಾನ ಸೇನೆ) ವಶದಲ್ಲಿದ್ದ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ಬಿಡುಗಡೆ ಮಾಡಲಾಗಿದೆ. ಪಾಕ್ ವಶದಲ್ಲಿದ್ದಾಗ ಅವರಿಗೆ ನಿದ್ರಿಸಲೂ ಬಿಡದೆ ನಿರಂತರವಾಗಿ ಕಿರುಕುಳ ನೀಡಲಾಗಿತ್ತು ಎಂದು ಮೂಲಗಳು ಬಹಿರಂಗಪಡಿಸಿವೆ.
ಪಾಕಿಸ್ತಾನಿ ಅಧಿಕಾರಿಗಳು ಪೂರ್ಣಂ ಕುಮಾರ್ ಶಾ ಅವರನ್ನು ವಶಕ್ಕೆ ಪಡೆದು, ಮೂರು ಸ್ಥಳಗಳಿಗೆ ಸ್ಥಳಾಂತರಿಸಿದ ಬಳಿಕ ಒಂದು ಜೈಲಿನಲ್ಲಿಟ್ಟರಂತೆ. ಈ ಸಂದರ್ಭದಲ್ಲಿ ಹೆಚ್ಚಿನ ದಿನಗಳಲ್ಲಿ ಅವರ ಕಣ್ಣುಗಳಿಗೆ ಬಟ್ಟೆ ಕಟ್ಟಲಾಗಿತ್ತು. ದೈಹಿಕವಾಗೇನೂ ಹಿಂಸೆ ನೀಡುತ್ತಿರಲಿಲ್ಲ. ಆದರೆ ಮೌಖಿಕವಾಗಿ ಸಾಕಷ್ಟು ಕಿರುಕುಳ ನೀಡಿದ್ದಾರೆ. ಕನಿಷ್ಠ ಪಕ್ಷ ನಿದ್ರಿಸಲು ಅಥವಾ ಹಲ್ಲುಜ್ಜಲು ಕೂಡಾ ಅವಕಾಶವಿರಲಿಲ್ಲ.
ಗಡಿಯಲ್ಲಿನ ಭಾರತೀಯ ಸೇನೆಯ ನಿಯೋಜನೆ ಮತ್ತು ಅಲ್ಲಿನ ಹಿರಿಯ ಅಧಿಕಾರಿಗಳ ಬಗ್ಗೆ ವಿವರಗಳನ್ನು ಜಾಲಾಡಲು ಪ್ರಯತ್ನಿಸಿದ್ದಾರೆ. ಅಧಿಕಾರಿಗಳ ಸಂಪರ್ಕ, ಇತರೆ ವಿವರಗಳನ್ನು ಒದಗಿಸುವಂತೆ ಒತ್ತಡ ಹೇರಿದ್ದಾರೆ. ಆದರೆ ಬಿಎಸ್‌ಎಫ್ ನಿಯಮಗಳ ಪ್ರಕಾರ, ಯೋಧ ಶಾ ಅವರ ಬಳಿ ಯಾವುದೇ ಫೋನ್ ಇರಲಿಲ್ಲ. ಆದ್ದರಿಂದ ಪಾಕಿಸ್ತಾನ ಅವರಿಂದ ವಿವರಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಎಲ್ಲಾ ಪ್ರಶ್ನೆಗಳನ್ನು ಕೇಳಿದ ಅಧಿಕಾರಿಗಳು ಸಿವಿಲ್ ಡ್ರೆಸ್‌ನಲ್ಲಿದ್ದರು ಎಂದು ಮೂಲಗಳು ಮಾಹಿತಿ ಒದಗಿಸಿವೆ.
ಕಳೆದ ಏಪ್ರಿಲ್ 23ರಂದು ಪಂಜಾಬ್‌ನ ಫಿರೋಜ್‌ಪುರ ವಲಯದ ಅಂತಾರಾಷ್ಟ್ರೀಯ ಗಡಿಯಲ್ಲಿ ಗಸ್ತು ತಿರುಗುತ್ತಿದ್ದಾಗ ಪೂರ್ಣಂ ಆಯಾಸಗೊಂಡಿದ್ದರು. ಹೀಗಾಗಿ ಸಮೀಪದ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಆ ಜಾಗ ಪಾಕಿಸ್ತಾನದ ಪ್ರದೇಶವಾಗಿತ್ತು. ಯೋಧ ಶಾ ಅದನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಭಾರತೀಯ ಯೋಧನನ್ನು ಕಂಡ ಪಾಕಿಸ್ತಾನಿ ರೇಂಜರ್‌ಗಳು, ತಕ್ಷಣ ಸ್ಥಳಕ್ಕೆ ಬಂದು ಅವರನ್ನು ವಶಕ್ಕೆ ಪಡೆದಿದ್ದರು.
ಇದಾದ ನಂತರ ಯೋಧನ ಬಿಡುಗಡೆಗಾಗಿ ಎರಡೂ ದೇಶಗಳ ಭದ್ರತಾ ಪಡೆಗಳ ಹಿರಿಯ ಅಧಿಕಾರಿಗಳು ನಿರಂತರವಾಗಿ 6 ಬಾರಿ ಮಾತುಕತೆ ನಡೆಸಿದ್ದರು. ಪೂರ್ಣಂ ಅವರ ಕುಟುಂಬ ಸದಸ್ಯರು ಸಾಕಷ್ಟು ಚಿಂತಿತರಾಗಿದ್ದರು. ಶಾ ಅವರ ಗರ್ಭಿಣಿ ಪತ್ನಿ ತನ್ನ ಪತಿಯ ಬಿಡುಗಡೆಗಾಗಿ ಕೇಂದ್ರ ಸರ್ಕಾರಕ್ಕೆ ಪರಿಪರಿಯಾಗಿ ಮನವಿ ಮಾಡುತ್ತಿದ್ದರು. ಆದರೆ, ಇನ್ನೊಂದೆಡೆ, ಪಾಕಿಸ್ತಾನಿ ರೇಂಜರ್‌ಗಳು ಭಾರತೀಯ ಅಧಿಕಾರಿಗಳ ವಿನಂತಿಗಳನ್ನು ನಿರ್ಲಕ್ಷಿಸುತ್ತಿದ್ದರು.
ಇದರ ಮಧ್ಯೆ ಈ ತಿಂಗಳ ಮೊದಲ ವಾರದಲ್ಲಿ, ರಾಜಸ್ಥಾನದ ಗಂಗಾನಗರ ಬಳಿ ಭಾರತದ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ್ದ ಪಾಕಿಸ್ತಾನಿ ರೇಂಜರ್ ಮುಹಮ್ಮದುಲ್ಲಾ ಎಂಬಾತನನ್ನು ಬಿಎಸ್‌ಎಫ್ ಬಂಧಿಸಿತ್ತು. ಇದು ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಿಸಿದೆ. ಪರಿಣಾಮ, ಪೂರ್ಣಂ ಕುಮಾರ್ ಶಾ ಅವರನ್ನು ಬಿಡುಗಡೆ ಮಾಡಿದ್ದಾರೆ. ಬಿಎಸ್‌ಎಫ್ ಕೂಡಾ ಪಾಕಿಸ್ತಾನಿ ಯೋಧನನ್ನು ಹಸ್ತಾಂತರಿಸಿತು ಎಂದು ವರದಿಯಾಗಿದೆ.