ಇಂಫಾಲ: ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಬುಧವಾರ ಅಸ್ಸಾಂ ರೈಫಲ್ಸ್ನೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 10 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ.
'ಇಂಡೋ-ಮ್ಯಾನ್ಮಾರ್ ಗಡಿಯ ಸಮೀಪವಿರುವ ಚಾಂಡೆಲ್ ಜಿಲ್ಲೆಯ ಖೆಂಗ್‌ಜಾಯ್ ತಹಸಿಲ್‌ನ ನ್ಯೂ ಸಮ್ತಾಲ್ ಗ್ರಾಮದ ಬಳಿ ಸಶಸ್ತ್ರ ಉಗ್ರರ ಚಲನವಲನಗಳ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಇತ್ತು. ಅದರ ಅನ್ವಯ ಸ್ಪಿಯರ್ ಕಾರ್ಪ್ಸ್ ಅಡಿಯಲ್ಲಿ ಅಸ್ಸಾಂ ರೈಫಲ್ಸ್ ಮೇ 14ರಂದು ಕಾರ್ಯಾಚರಣೆ ಪ್ರಾರಂಭಿಸಿತ್ತು' ಎಂದು ಸೇನೆಯ ಪೂರ್ವ ಕಮಾಂಡ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.
ಕಾರ್ಯಾಚರಣೆ ವೇಳೆ ಶಂಕಿತ ಉಗ್ರರು ಸೈನಿಕರ ಮೇಲೆ ಗುಂಡು ಹಾರಿಸಿದರು. ಅದಕ್ಕೆ ಸೇನೆಯು ತ್ವರಿತ ಪ್ರತಿಕ್ರಿಯೆ ನೀಡಿತು. ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ 10 ಜನ ಉಗ್ರರನ್ನು ಹತ್ಯೆ ಮಾಡಲಾಗಿದೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.