ನವದೆಹಲಿ: ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ, ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಬಳಿಕ ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಗೆ ನೇಮಕಗೊಂಡ ನ್ಯಾಯಮೂರ್ತಿ ಗವಾಯಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ ಸ್ವೀಕರಿಸಿರುವ ಗವಾಯಿ ಅವರು ಇನ್ನೂ 6 ತಿಂಗಳ ಕಾಲ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರದಲ್ಲಿರಲಿದ್ದರೆ. ನವೆಂಬರ್ 23, 2025 ರಂದು ಅವರು ನಿವೃತ್ತಿ ಹೊಂದಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪಾಧ್ಯಕ್ಷ ಜಗದೀಪ್ ಧನಕರ್, ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ನ್ಯಾಯಮೂರ್ತಿ ಗವಾಯಿ ಅವರ ಕುಟುಂಬ ಸದಸ್ಯರು, ಮಾಜಿ ಸಿಜೆಐ ಸಂಜೀವ್ ಖನ್ನಾ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಭಾಗವಹಿಸಿದ್ದರು.
ನ್ಯಾಯಮೂರ್ತಿ ಗವಾಯಿ ಅವರು ಬಿಹಾರ, ಕೇರಳ ಮತ್ತು ಸಿಕ್ಕಿಂನ ಮಾಜಿ ರಾಜ್ಯಪಾಲರು ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ (ಗವಾಯಿ ಬಣ) ಹಿರಿಯ ನಾಯಕ ದಿವಂಗತ ಆರ್.ಎಸ್. ಗವಾಯಿ ಅವರ ಪುತ್ರ. ಅವರು ನವೆಂಬರ್ 24, 1960ರಂದು ಅಮರಾವತಿಯಲ್ಲಿ ಜನಿಸಿದರು. ಮಾರ್ಚ್ 16, 1985ರಂದು ವಕೀಲ ವೃತ್ತಿ ಆರಂಭಿಸಿದ ಅವರು 1987ರಿಂದ 1990ರ ವರೆಗೆ ಬಾಂಬೆ ಹೈಕೋರ್ಟ್ನಲ್ಲಿ, 1990ರ ನಂತರ ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠದೆದುರು ವೃತ್ತಿ ಅಭ್ಯಾಸ ಮಾಡಿದ್ದಾರೆ.