ಮಹಾರಾಷ್ಟ್ರ : ಭಾರತೀಯ ಸೇನಾಪಡೆಗಳ ಕಾರ್ಯಾಚರಣೆಯನ್ನು ಎದುರಿಸದೆ ವಿಶ್ವದ ಮುಂದೆ ಅವಮಾನಕ್ಕೀಡಾಗಿರುವ ಪಾಕಿಸ್ತಾನ, ತಂತ್ರಜ್ಞಾನದಲ್ಲೂ ಎಷ್ಟು ಟೊಳ್ಳು ಎಂಬುದನ್ನು ತಾನೇ ತೋರಿಸಿಕೊಂಡಿದೆ. ಭಾರತದ ವೆಬ್‌ಸೈಟ್‌ಗಳ ಮೇಲೆ 15 ಲಕ್ಷ ಬಾರಿ ಸೈಬರ್ ದಾಳಿ ನಡೆಸಿ ಯಶಸ್ಸು ಕಂಡಿದ್ದು ಬರೀ 150 ಸಲ ಮಾತ್ರ.ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನವು ಭಾರತದ ಸೇನೆ, ಆಡಳಿತ, ಸರ್ಕಾರ ಸೇರಿ ಇನ್ನಿತರ ವೆಬ್‌ಸೈಟ್‌ಗಳನ್ನು ಗುರಿಯಾಗಿಸಿಕೊಂಡು 15 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿಗಳನ್ನು ನಡೆಸಿದೆ ಎಂದು ಮಹಾರಾಷ್ಟ್ರದ ಸೈಬರ್ ವಿಭಾಗ ಗುರುತಿಸಿದೆ. ಇಷ್ಟು ಬಾರಿಯ ದಾಳಿಯಲ್ಲಿ ಪಾಕಿಸ್ತಾನದ ಸೈಬರ್ ಕಳ್ಳರು ಕೇವಲ 150 ಬಾರಿ ಮಾತ್ರ ಯಶಸ್ವಿಯಾಗಿದ್ದಾರೆ ಎಂದು ಅದು ತಿಳಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಮಹಾರಾಷ್ಟ್ರದ ಹಿರಿಯ ಅಧಿಕಾರಿಯೊಬ್ಬರು, "ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವಾಯುಯಾನ ಸಂಸ್ಥೆಗಳು, ಸ್ಥಳೀಯ ಆಡಳಿತ ಸಂಸ್ಥೆಗಳು, ಚುನಾವಣಾ ಆಯೋಗದ ವೆಬ್‌ಸೈಟ್‌ಗಳ ಮೇಲೆ ಪಾಕಿಸ್ತಾನದ ಹ್ಯಾಕರ್‌ಗಳು ದಾಳಿ ಮಾಡಿ ಡೇಟಾ ಕದಿಯಲು ಯತ್ನಿಸಿದ್ದಾರೆ" ಎಂದರು.
"ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಿಸಿದ ನಂತರ ಸರ್ಕಾರಿ ವೆಬ್‌ಸೈಟ್‌ಗಳ ಮೇಲಿನ ಸೈಬರ್ ದಾಳಿಗಳು ಕಡಿಮೆಯಾಗಿವೆ. ಆದಾಗ್ಯೂ, ಸಂಪೂರ್ಣವಾಗಿ ನಿಂತಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಷ್ಯಾ, ಮೊರಾಕ್ಕೊ ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಈ ದಾಳಿಗಳು ಮುಂದುವರೆದಿವೆ" ಎಂದು ಮಹಾರಾಷ್ಟ್ರ ಸೈಬರ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಯಶಸ್ವಿ ಯಾದವ್ ಹೇಳಿದರು.
"ಪಾಕಿಸ್ತಾನ ಮೂಲದ APT 36, ಪಾಕಿಸ್ತಾನ ಸೈಬರ್ ಫೋರ್ಸ್, ಟೀಮ್ ಇನ್ಸೇನ್ ಪಿಕೆ, ಮಿಸ್ಟೀರಿಯಸ್ ಬಾಂಗ್ಲಾದೇಶ, ಇಂಡೋ ಹ್ಯಾಕ್ಸ್ ಸೆಕ್, ಸೈಬರ್ ಗ್ರೂಪ್ HOAX 1337, ನ್ಯಾಷನಲ್ ಸೈನರ್ ಕ್ರೂ ಹ್ಯಾಕಿಂಗ್ ಗುಂಪುಗಳು ಒಟ್ಟಾಗಿ ಭಾರತದ ವೆಬ್‌ಸೈಟ್‌ಗಳನ್ನು ಗುರಿಯಾಗಿಸಿ 15 ಲಕ್ಷಕ್ಕೂ ಅಧಿಕ ಸೈಬರ್ ದಾಳಿಗಳನ್ನು ನಡೆಸಿವೆ" ಎಂದು ಯಾದವ್ ಅವರು ಮಾಹಿತಿ ಹಂಚಿಕೊಂಡರು.
150 ಸೈಬರ್ ದಾಳಿಗಳಲ್ಲಿ ಯಶ ಕಂಡಿರುವ ಪಾಕ್ ಕಳ್ಳರು, ಕುಲ್ಗಾಂವ್ ಬದ್ಲಾಪುರ್ ಮುನ್ಸಿಪಲ್ ಕೌನ್ಸಿಲ್ ವೆಬ್‌ಸೈಟ್ ವಿರೂಪಗೊಳಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣ ಮತ್ತು ಟೆಲಿಕಾಂ ಕಂಪನಿಗಳಿಂದ ಡೇಟಾ ಕದ್ದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಕೆಲವು ಡೇಟಾ ಡಾರ್ಕ್‌ನೆಟ್‌ನಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಜಲಂಧರ್‌ನಲ್ಲಿರುವ ಡಿಫೆನ್ಸ್ ನರ್ಸಿಂಗ್ ಕಾಲೇಜಿನ ವೆಬ್‌ಸೈಟ್ ಕೂಡ ಹ್ಯಾಕ್ ಆಗಿದೆ.
"ಭಾರತ ಸೇನಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ 5 ಸಾವಿರಕ್ಕೂ ಹೆಚ್ಚು ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ಹರಡಲಾಗಿದೆ. ಅದರಲ್ಲಿ 80 ತಪ್ಪು ಮಾಹಿತಿಗಳಲ್ಲಿ 35 ಸುಳ್ಳನ್ನು ಅಳಿಸಲಾಗಿದೆ. ಉಳಿದ 45 ಇನ್ನೂ ಬಾಕಿ ಇವೆ" ಎಂದು ಅಧಿಕಾರಿ ಹೇಳಿದರು.