ನವದೆಹಲಿ: "ಭಾರತ ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಂಡಿದೆ. ಆದರೆ, ಪಾಕಿಸ್ತಾನ ಭಯೋತ್ಪಾದಕರನ್ನು ಬೆಂಬಲಿಸಿತು. ಆದ್ದರಿಂದ, ಭಾರತೀಯ ಸಶಸ್ತ್ರ ಪಡೆಗಳು ಪ್ರತೀಕಾರ ತೀರಿಸಿಕೊಂಡವು" ಎಂದು ಏರ್ ಮಾರ್ಷಲ್ ಎ.ಕೆ.ಭಾರ್ತಿ ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತ ಇಂದು ಎರಡನೇ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, "ನಮ್ಮ ಹೋರಾಟ ಭಯೋತ್ಪಾದನೆ ಮತ್ತು ಅದರ ಬೆಂಬಲಿತ ಮೂಲಸೌಕರ್ಯದ ವಿರುದ್ಧವೇ ಹೊರತು, ಪಾಕಿಸ್ತಾನ ಸೇನೆಯ ವಿರುದ್ಧ ಅಲ್ಲ ಎಂದು ನಾವು ಪುನರುಚ್ಚರಿಸುತ್ತೇವೆ. ಆದರೆ ಪಾಕಿಸ್ತಾನ ಭಯೋತ್ಪಾದಕರನ್ನು ರಕ್ಷಿಸಲು ಮುಂದಾಯಿತು. ಆದ್ದರಿಂದ, ನಾವು ಪ್ರತೀಕಾರ ತೀರಿಸಿಕೊಂಡೆವು. ನಮ್ಮ ಹೋರಾಟ ಭಯೋತ್ಪಾದನೆಯ ವಿರುದ್ಧವಾಗಿರುವುದರಿಂದ ಮೇ 7ರಂದು ನಾವು ಭಯೋತ್ಪಾದಕ ಶಿಬಿರಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದೆವು" ಎಂದು ಅವರು ಹೇಳಿದರು.
ಕಾರ್ಯಾಚರಣೆಯಿಂದ ಸಂಭವಿಸಿದ ಹಾನಿಯ ಕುರಿತು ಮಾತನಾಡಿದ ಅವರು, "ನಮ್ಮ ಕ್ರಮ ಅಗತ್ಯವಾಗಿತ್ತು. ಪಾಕಿಸ್ತಾನಕ್ಕೆ ಯಾವುದೇ ಹಾನಿಯಾಗಿದ್ದರೂ ಅವರಿಂದಲೇ ಆಗಿದೆ. ನಮ್ಮ ಕಡೆಯಿಂದ ಕನಿಷ್ಠ ಹಾನಿಯಾಗಿದೆ" ಎಂದು ತಿಳಿಸಿದರು. "ಕಾರ್ಯಾಚರಣೆಯ ವೇಳೆ ಪಾಕಿಸ್ತಾನ ದಾಳಿಗೆ ಮುಂದಾದಾಗ ನಮ್ಮ ವಾಯು ರಕ್ಷಣಾ ವ್ಯವಸ್ಥೆಯು ಗೋಡೆಯಂತೆ ನಿಂತಿತು. ಮತ್ತು ಅದನ್ನು ಭೇದಿಸುವುದು ಶತ್ರುಗಳಿಗೆ ಅಸಾಧ್ಯವಾಗಿತ್ತು" ಎಂದು ಹೇಳಿದರು.
"ನಮ್ಮ ವಾಯುಪಡೆಯು ಮಿಲಿಟರಿ ಮತ್ತು ನಾಗರಿಕ ಮೂಲಸೌಕರ್ಯವನ್ನು ರಕ್ಷಿಸಿತು. ಪಾಕಿಸ್ತಾನವು ಬಳಸುತ್ತಿದ್ದ ಹಲವಾರು ಡ್ರೋನ್‌ಗಳು ಮತ್ತು ಮಾನವರಹಿತ ವಾಹನಗಳನ್ನು ನಮ್ಮ ಸ್ಥಳೀಯ ವ್ಯವಸ್ಥೆ ನಾಶಪಡಿಸಿತು" ಎಂದು ವಿವರಿಸಿದರು.
ಭವಿಷ್ಯದ ಯಾವುದೇ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಭಾರತ ಸಿದ್ಧವಾಗಿದೆ ಎಂದ ಅವರು, "ಅತ್ಯಾಧುನಿಕ ಮಿಲಿಟರಿ ಶಸ್ತ್ರಾಸ್ತ್ರಗಳ ಖರೀದಿಯಲ್ಲಿ ಸರ್ಕಾರ ನೀಡಿದ ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ. ಸ್ಥಳೀಯ ವಾಯು ರಕ್ಷಣಾ ವ್ಯವಸ್ಥೆಯ ಕಾರ್ಯಕ್ಷಮತೆ ಅತ್ಯುತ್ತಮವಾಗಿತ್ತು ಹಾಗೂ ನಮ್ಮ ಸ್ಥಳೀಯ ಆಕಾಶ್ ವ್ಯವಸ್ಥೆಯೂ ಅದ್ಭುತ ಕಾರ್ಯಕ್ಷಮತೆ ತೋರಿಸಿದೆ" ಎಂದು ಅವರು ಹೇಳಿದರು.
ನಾಶವಾದ ನೂರ್ ಖಾನ್ ವಾಯುನೆಲೆ, ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಅನೇಕ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡರು. ಕದನದ ವೇಳೆ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಹಾನಿಯಾಗಿಲ್ಲ ಎಂದು ಹೇಳಿದರು.