ಉತ್ತರ ಪ್ರದೇಶ : "ಆಪರೇಷನ್ ಸಿಂಧೂರ್‌ನಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಅನಾವರಣಗೊಂಡಿದೆ. ಇದು ಸಾಕಾಗದಿದ್ದರೆ, ಪಾಕಿಸ್ತಾನಿಯರನ್ನು ಈ ಬಗ್ಗೆ ಕೇಳಬೇಕು" ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು. ಬ್ರಹ್ಮೋಸ್ ಕ್ಷಿಪಣಿ ತಯಾರಿಕೆಗಾಗಿ ಬ್ರಹ್ಮೋಸ್ ಏರೋಸ್ಪೇಸ್ ಇಂಟಿಗ್ರೇಷನ್ ಮತ್ತು ಪರೀಕ್ಷಾ ಸೌಲಭ್ಯದ ಉದ್ಘಾಟನಾ ಸಮಾರಂಭದಲ್ಲಿಂದು ಮಾತನಾಡಿದ ಅವರು, "ಭಯೋತ್ಪಾದನೆಯನ್ನು ಬಗ್ಗು ಬಡಿಯುವ ಸಮಯ ಬಂದಿದೆ ಮತ್ತು ಅದಕ್ಕೆ ಇಡೀ ದೇಶ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಒಂದಾಗಬೇಕು" ಎಂದು ಕರೆ ನೀಡಿದರು.
"ಆಪರೇಷನ್ ಸಿಂಧೂರ್ ಸಮಯದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಶೌರ್ಯವನ್ನು ನೋಡಿದ್ದೇವೆ. ನೋಡಿರದಿದ್ದರೆ ಆ ಕ್ಷಿಪಣಿಯ ಶಕ್ತಿಯ ಬಗ್ಗೆ ಪಾಕಿಸ್ತಾನಿಗರನ್ನು ಕೇಳಿ. ಯಾವುದೇ ಭಯೋತ್ಪಾದನಾ ಚಟುವಟಿಕೆಯನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ನಾವು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವವರೆಗೆ ಈ ಸಮಸ್ಯೆಗೆ ಯಾವುದೇ ಪರಿಹಾರವಿಲ್ಲ" ಎಂದರು. "ಭಯೋತ್ಪಾದನೆ ನಾಯಿಯ ಬಾಲದಂತೆ, ಅದು ಎಂದಿಗೂ ನೇರವಾಗುವುದಿಲ್ಲ. ಭಯೋತ್ಪಾದನೆ ಪ್ರೀತಿಯ ಭಾಷೆಯನ್ನು ಅನುಸರಿಸುವುದಿಲ್ಲ. ನಾವು ಅದಕ್ಕೆ ಅದರದೇ ಭಾಷೆಯಲ್ಲಿ ಉತ್ತರ ನೀಡಬೇಕು. ಆ ದಿಕ್ಕಿನಲ್ಲಿ ಭಾರತ ಆಪರೇಷನ್ ಸಿಂಧೂರ್ ಮೂಲಕ ಜಗತ್ತಿಗೆ ಸಂದೇಶ ರವಾನಿಸಿದೆ" ಎಂದು ಹೇಳಿದರು.