ಗಾಜಾ: ಗಾಜಾ ಮೇಲಿನ ವಾಯುದಾಳಿಯನ್ನು ಇಸ್ರೇಲ್ ಇನ್ನಷ್ಟು ತೀವ್ರಗೊಳಿಸಿದೆ. ಶನಿವಾರ ಗಾಜಾ ಪಟ್ಟಿ ಮೇಲೆ ನಡೆಸಿದ ದಾಳಿಯಲ್ಲಿ ಹಲವು ಮಕ್ಕಳು ಸೇರಿದಂತೆ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮಧ್ಯ ಗಾಜಾ ಪಟ್ಟಿಯ ದೇರ್ ಅಲ್-ಬಲಾಹ್‌ನಲ್ಲಿ ಸ್ಥಳಾಂತರಗೊಂಡ ಕುಟುಂಬಗಳಿಗೆ ಆಶ್ರಯ ನೀಡಿದ್ದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಲ್ವರು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇದಕ್ಕೂ ಮುನ್ನ ಇಸ್ರೇಲಿ ಯುದ್ಧ ವಿಮಾನಗಳು ಗಾಜಾ ನಗರದ ನೆರೆಹೊರೆಯಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿ, ತ್ಲೈಬ್ ಕುಟುಂಬದ ಐವರು ಸದಸ್ಯರನ್ನು ಕೊಂದಿವೆ ಎಂದು ಪ್ಯಾಲೆಸ್ಟೀನಿಯನ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಜೊತೆಗೆ ಗಾಜಾ ನಗರದ ತುಫಾ ನೆರೆಹೊರೆಯೆ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಆರು ಜನ ಸಾವನ್ನಪ್ಪಿದ್ದರೆ, ಶೇಖ್ ರಾಡ್ವಾನ್ ಪ್ರದೇಶದಲ್ಲಿರುವ ಜಕೌತ್ ಕುಟುಂಬಕ್ಕೆ ಸೇರಿದ ಅಪಾರ್ಟ್ಮೆಂಟ್ ಮೇಲೆ ಇಸ್ರೇಲ್ ಮಾಡಿದ ಬಾಂಬ್ ದಾಳಿಗೆ ಒಬ್ಬರು ಮೃತಪಟ್ಟಿದ್ದಾರೆ.
ಮಾರ್ಚ್ 2ರ ನಂತರದಿಂದ ಗಾಜಾಗೆ ಪ್ರಮುಖ ವಸ್ತುಗಳ ಸರಬರಾಜು ಮಾಡಲು ಇಸ್ರೇಲ್ ನಿರಂತರವಾಗಿ ನಿರಾಕರಿಸುತ್ತ ಬಂದಿದೆ. ಈ ನಡುವೆ ಯುದ್ಧ ವಿರಾಮವನ್ನು ಉಲ್ಲಂಘಿಸಿರುವ ಇಸ್ರೇಲ್ ಗಾಜಾ ಮೇಲೆ ಮತ್ತೆ ದಾಳಿ ಶುರುವಿಟ್ಟುಗೊಂಡಿದೆ. ಈಗಾಗಲೇ, ಎನ್ಕ್ಲೇವ್ನ 2.3 ಮಿಲಿಯನ್ ನಿವಾಸಿಗಳು ಉಚಿತ ಆಹಾರ ಕೇಂದ್ರಗಳ ಮೇಲೆ ಅವಲಂಬಿತವಾಗಿದ್ದಾರೆ. ಆದರೆ, ಆಹಾರ ವಸ್ತುಗಳ ಕೊರತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಆಹಾರ ಕೇಂದ್ರಗಳು ಕೂಡ ಬಾಗಿಲು ಮುಚ್ಚುತ್ತಿವೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿಯು ಗಾಜಾ ಮೇಲಿನ ದಿಗ್ಬಂಧನವನ್ನು ತೆಗೆದುಹಾಕುವಂತೆ ಮನವಿ ಮಾಡಿದೆ. ಈ ಬಗ್ಗೆ ಶುಕ್ರವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ನಲ್ಲಿ, "ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ಆಹಾರ ಸಿಗದೆ ಸಾಯುತ್ತಿದ್ದಾರೆ. ಸಮುದಾಯ ಆಹಾರ ಕೇಂದ್ರಗಳು ಮುಚ್ಚುತ್ತಿವೆ. ಶುದ್ಧ ನೀರು ಖಾಲಿಯಾಗುತ್ತಿದೆ. ಈ ದಿಗ್ಬಂಧನ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವ ಜನರ ಮೇಲೂ ವಿನಾಶಕಾರಿ ಪರಿಣಾಮ ಬೀರುತ್ತದೆ. ಮಧುಮೇಹ, ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆ ಹೊಂದಿರುವ ಪ್ಯಾಲೆಸ್ಟೀನಿಯರು ಜೀವ ಉಳಿಸಿಕೊಳ್ಳಲು ಔಷಧಗಳಿಗಾಗಿ ಪರದಾಡುತ್ತಿದ್ದಾರೆ" ಎಂದು ಕಳವಳ ವ್ಯಕ್ತಪಡಿಸಿತ್ತು.