ನವದೆಹಲಿ: ಸಾಮಾನ್ಯವಾಗಿ ಜೂನ್ 1ರಂದು ನೈರುತ್ಯ ಮಾನ್ಸೂನ್(mansoon) ಕೇರಳವನ್ನು ಪ್ರವೇಶಿಸುವುದು ವಾಡಿಕೆ. ಆದರೆ ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಈ ಬಾರಿ 5 ದಿನಗಳು ಮುಂಚಿತವಾಗಿಯೇ ಅಂದರೆ ಮೇ 27ರಂದೇ ನೈರುತ್ಯ ಮಾನ್ಸೂನ್ ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ.
ನಿರೀಕ್ಷೆಯಂತೆ, ಕೇರಳಕ್ಕೆ(kerala) ಮಾನ್ಸೂನ್ 27ಕ್ಕೆ ಆಗಮಿಸಿದರೆ, 16 ವರ್ಷಗಳ ಬಳಿಕ ಮೊದಲ ಬಾರಿಗೆ ಭಾರತದ ಮುಖ್ಯ ಭೂಭಾಗಗಳಲ್ಲಿ ನೈರುತ್ಯ ಮಾನ್ಸೂನ್ ಬಹು ಬೇಗನೆ ಆರಂಭವಾದಂತಾಗಲಿದೆೆ. ಇದಕ್ಕೂ ಮುನ್ನ 2009ರಲ್ಲಿ ಮೇ 23ರಂದು ಕೇರಳಕ್ಕೆ ನೈರುತ್ಯ ಮಾನ್ಸೂನ್ ಅಪ್ಪಳಿಸಿತ್ತು.
ಕೇರಳವನ್ನು ಪ್ರವೇಶಿದ ನಂತರ ಭಾರತದ ಮುಖ್ಯ ಭೂ ಭಾಗಗಳಿಗೆ ಮಳೆ ಆಗಮಿಸುವ ಬಗ್ಗೆ ಅಧಿಕೃತವಾಗಿ ಘೋಷಿಸಲಾಗುತ್ತದೆ. ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳಕ್ಕೆ ಆಗಮಿಸುವ ಮುಂಗಾರು ಮಳೆ ಜೂನ್ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಸೆಪ್ಟೆಂಬರ್ 17ರ ಸುಮಾರಿಗೆ ವಾಯವ್ಯ ಭಾರತದಿಂದ ಹಿಂದೆ ಸರಿಯಲು ಆರಂಭಿಸಿ, ಅಕ್ಟೋಬರ್ 15ರ ವೇಳೆಗೆ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ.
ಕಳೆದ ವರ್ಷ ಮೇ 30ರಂದು, 2023ರಲ್ಲಿ ಜೂನ್ 8, 2022ರಲ್ಲಿ ಮೇ 29, 2021ರಲ್ಲಿ ಜೂನ್ 3, 2020ರಲ್ಲಿ ಜೂನ್ 1, 2019ರಲ್ಲಿ ಜೂನ್ 8, ಮತ್ತು 2018ರಲ್ಲಿ ಮೇ 29ರಂದು ಮಾನ್ಸೂನ್ ಕೇರಳಕ್ಕೆ ಪ್ರವೇಶಿಸಿತ್ತು. ಮಳೆಗಾಲ ಆರಂಭದ ದಿನಾಂಕಕ್ಕೂ, ಈ ವರ್ಷ ದೇಶದಲ್ಲಾಗುವ ಒಟ್ಟು ಮಳೆಯ ಪ್ರಮಾಣಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಅದಲ್ಲದೆ, ಕೇರಳಕ್ಕೆ ಮುಂಗಾರು ವಾಡಿಕೆಗಿಂದ ಬೇಗ ಅಥವಾ ತಡವಾಗಿ ಆಗಮಿಸುವುದರಿಂದ ದೇಶದ ಇತರ ಭಾಗಗಳಲ್ಲೂ ಕೂಡ ನಿಗದಿತ ಸಮಯದಲ್ಲಿ ಆವರಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದು ಜಾಗತಿಕ, ಪ್ರಾದೇಶಿಕ ಮತ್ತು ಸ್ಥಳೀಯ ವೈಶಿಷ್ಟ್ಯಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಐಎಂಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.