ನವದೆಹಲಿ: ಗಡಿಯಾಚೆಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹಣಕಾಸು ನೆರವು ನೀಡುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿತ್ತು. ಆದರೂ ಕೂಡ ಪಾಕಿಸ್ತಾನಕ್ಕೆ ಐಎಂಎಫ್ 1 ಬಿಲಿಯನ್ ಯುಎಸ್ಡಿ ಡಾಲರ್ ಸಾಲ ನೀಡಲು ಅನುಮೋದನೆ ನೀಡಿದೆ. ವಿಸ್ತೃತ ನಿಧಿ ಸೌಲಭ್ಯದ ಅಡಿಯಲ್ಲಿ ಪಾಕಿಸ್ತಾನಕ್ಕೆ ಸಾಲ ನೀಡಲು ಶುಕ್ರವಾರ ಐಎಂಎಫ್ ಸಮ್ಮತಿಸಿದೆ.
ತನ್ನ ಕಾರ್ಯನಿರ್ವಾಹಕ ಮಂಡಳಿಯ ವಿಸ್ತೃತ ನಿಧಿ ಸೌಲಭ್ಯ (EFF) ವ್ಯವಸ್ಥೆಯ ಅಡಿಯಲ್ಲಿ ಪಾಕಿಸ್ತಾನದ ಆರ್ಥಿಕ ಸುಧಾರಣಾ ಕಾರ್ಯಕ್ರಮ ನವೀಕರಿಸಲು ನಿರ್ಧರಿಸಲಾಗಿದೆ ಎಂದು ವಾಷಿಂಗ್ಟನ್ ಮೂಲದ ಜಾಗತಿಕ ಸಾಲದಾತ ಐಎಂಎಫ್ ತಿಳಿಸಿದೆ.
"ಈ ನಿರ್ಧಾರವು ಸುಮಾರು 1 ಬಿಲಿಯನ್ USD (SDR 760 ಮಿಲಿಯನ್) ನಷ್ಟು ಸಾಲ ತಕ್ಷಣ ವಿತರಣೆಗೆ ಅವಕಾಶ ನೀಡುತ್ತದೆ. ಜೊತೆಗೆ ಇದು ಒಟ್ಟು ಸುಮಾರು 2.1 ಬಿಲಿಯನ್ USD (SDR 1.52 ಬಿಲಿಯನ್) ಸಾಲ ನೀಡಲು ಅವಕಾಶ ಇದೆ" ಎಂದು ಸಂಸ್ಥೆ ತಿಳಿಸಿದೆ.
ಐಎಂಎಫ್ ಸಾಲದ ರೂಪದಲ್ಲಿ ನೀಡುವ ಹಣಕಾಸು ನೆರವನ್ನು ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಗೆ ಬಳಸಿಕೊಂಡು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಭಾರತ ಕಳವಳ ವ್ಯಕ್ತಪಡಿಸಿತ್ತು. ಜೊತೆಗೆ ಪಾಕಿಸ್ತಾನಕ್ಕೆ 2.3 ಶತಕೋಟಿ ಯುಎಸ್ ಡಾಲರ್ ಹೊಸ ಸಾಲ ವಿಸ್ತರಿಸುವ ಐಎಂಎಫ್ ಪ್ರಸ್ತಾಪವನ್ನು ಭಾರತ ವಿರೋಧಿಸಿತ್ತು.
ಪಾಕಿಸ್ತಾನಕ್ಕೆ ಸಾಲದ ರೂಪದಲ್ಲಿ ಹಣಕಾಸು ನೆರವು ಕಾರ್ಯಕ್ರಮವನ್ನು ಪರಿಶೀಲಿಸಲು ಶುಕ್ರವಾರ ಸಭೆ ಸೇರಿದ ಐಎಂಎಫ್ ಮಂಡಳಿಯಲ್ಲಿ ಭಾರತ ತನ್ನ ಪ್ರತಿಭಟನೆಯನ್ನು ದಾಖಲಿಸಿತ್ತು. ಆದರೂ ಕೂಡ ಐಎಂಎಫ್, ಪಾಕ್ಗೆ ಸಾಲ ನೀಡುವ ನಿರ್ಧಾರ ಕೈಗೊಂಡಿದೆ.