ನವದೆಹಲಿ: "ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಎಲ್‌ಪಿಜಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು ಸಾರ್ವಜನಿಕರು ಇಂಧನ ಖರೀದಿಗೆ ಭಯ ಬೀಳುವ ಅಗತ್ಯವಿಲ್ಲ" ಎಂದು ದೇಶದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಹೇಳಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ಜನರು ಇಂಧನವನ್ನು ಸಂಗ್ರಹಿಸಲು ಪೆಟ್ರೋಲ್ ಪಂಪ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತಿರುವುದನ್ನು ತೋರಿಸುವ ಪೋಸ್ಟ್‌ಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಹರಿದಾಡುತ್ತಿದ್ದು, ಈ ಹಿನ್ನೆಲೆ ಐಒಸಿ ಈ ಹೇಳಿಕೆ ನೀಡಿದೆ. ಇಂಡಿಯನ್ ಆಯಿಲ್ ದೇಶಾದ್ಯಂತ ಸಾಕಷ್ಟು ಇಂಧನ ದಾಸ್ತಾನುಗಳನ್ನು ಹೊಂದಿದೆ ಮತ್ತು ನಮ್ಮ ಸರಬರಾಜು ಮಾರ್ಗಗಳು ಸರಾಗವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಐಒಸಿ ಎಕ್ಸ್‌ನಲ್ಲಿ ಪೋಸ್ಟ್ನಲ್ಲಿ ತಿಳಿಸಿದೆ.
"ಭೀತಿಯಿಂದ ಖರೀದಿಯ ಅಗತ್ಯವಿಲ್ಲ, ಇಂಧನ ಮತ್ತು ಎಲ್‌ಪಿಜಿ ನಮ್ಮ ಎಲ್ಲಾ ಮಳಿಗೆಗಳಲ್ಲಿ ಸುಲಭವಾಗಿ ಲಭ್ಯವಿದೆ" ಎಂಬ ಭರವಸೆಯನ್ನು ಆಯಿಲ್ ಕಾರ್ಪೊರೇಷನ್ ನೀಡಿದೆ.
ಉದ್ವಿಗ್ನತೆ ಮತ್ತು ಭೀತಿಯ ಹಿನ್ನೆಲೆ ಇಂಧನ ಖರೀದಿಯಲ್ಲಿ ಏರಿಕೆಯಾಗಿವೆ. "ಶಾಂತವಾಗಿರುವುದು ಮತ್ತು ಅನಗತ್ಯ ದಟ್ಟಣೆಯನ್ನು ತಪ್ಪಿಸುವ ಮೂಲಕ ನಿಮಗೆ ಉತ್ತಮ ಸೇವೆ ಸಲ್ಲಿಸಲು ನಮಗೆ ಸಹಾಯ ಮಾಡಿ. ಇದು ನಮ್ಮ ಪೂರೈಕೆ ಮಾರ್ಗಗಳನ್ನು ಸರಾಗವಾಗಿ ಚಾಲನೆಯಲ್ಲಿರುತ್ತದೆ ಮತ್ತು ಎಲ್ಲರಿಗೂ ಅಡೆತಡೆಯಿಲ್ಲದ ಇಂಧನ ಖರೀದಿಸಬಹುದು" ಎಂದು ಐಒಸಿ ಹೇಳಿದೆ.